ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಟಾಸ್ಕ್‌ಗಳು, ಕ್ಯಾಪ್ಟನ್ಸಿ ಓಟ ನಡೆಯದೆ ಮನೆಯೊಳಗೆ ಜಗಳ, ವಾಗ್ವಾದಗಳು ಹೆಚ್ಚಾಗಿದ್ದವು. ಕೆಲ ಸ್ಪರ್ಧಿಗಳು ಕೀಳು ಭಾಷೆ ಬಳಸಿದ ಆರೋಪವೂ ಕೇಳಿಬಂದಿತ್ತು. ಹೀಗಾಗಿ ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಮಾತನಾಡುವ ವೇಳೆ ಸುದೀಪ್ ಅವರು ವಿಶೇಷವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಾಂಡವ್ ಮಾತನಾಡಲು ಆರಂಭಿಸುವ ಮೊದಲೇ ಗಾನವಿ ಪ್ರತ್ಯುತ್ತರ ನೀಡಲು ಸಿದ್ಧರಾಗುತ್ತಾರೆ ಎಂದು ಸುದೀಪ್ ಹೇಳಿದರು.
“ನಿಮಗೆ ತಾಳ್ಮೆ ಇಲ್ಲ ಎಂದಾದರೆ ದಯವಿಟ್ಟು ಹೊರಗೆ ಹೋಗಿಬಿಡಿ. ನೀವ್ಯಾರೂ ಇಲ್ಲದೇ ಇದ್ದರೂ ಪರವಾಗಿಲ್ಲ. ಪ್ರತಿ ವಾರವೂ ನಾನು ಈ ವೇದಿಕೆಗೆ ಬರುತ್ತೀನಿ. ಹಾಡು ಹಾಡಿಯೋ, ಡ್ಯಾನ್ಸ್ ಮಾಡಿಯೋ ಜನರನ್ನು ರಂಜಿಸುತ್ತೇನೆ. ಶೋ ಕಂಪ್ಲೀಟ್ ಮಾಡುತ್ತೀನಿ” ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ: UPI PAYMENT: ಶುಲ್ಕ ತಪ್ಪಿಸಲು ಹೋಗಿ ಈ ರೀತಿ ಪೇಮೆಂಟ್ ಮಾಡಿದ್ರೆ ಹಣ ಕಳೆದುಕೊಳ್ತಿರಾ ಹುಷಾರ್?
ಗಾನವಿ ವರ್ತನೆಗೆ ಸುದೀಪ್ ಬೇಸರ
ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಕಟಕಟೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಾನವಿ ಅವರ ವರ್ತನೆಗೂ ಸುದೀಪ್ ಬೇಸರಗೊಂಡಿದ್ದರು. ಗಾನವಿ ಕಟಕಟೆಗೆ ಬಂದಾಗಲೇ ಕಾವ್ಯಾ ಜೊತೆ ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿದೆ.
ಈ ವೇಳೆ ಸುದೀಪ್ ಅವರು ಮಾತನಾಡಲು ಅವಕಾಶ ನೀಡುವಂತೆ ಸೂಚಿಸಿದರೂ ವಾಗ್ವಾದ ಮುಂದುವರಿದ ಹಿನ್ನೆಲೆಯಲ್ಲಿ, “ನೀವು ಮಾತನಾಡಿಕೊಳ್ಳಿ, ನಾನು ಹೊರಗೆ ಹೋಗುತ್ತೇನೆ” ಎಂದು ಹೇಳಿ ವೇದಿಕೆಯಿಂದ ಹೊರನಡೆದರು.
ನಂತರ ಸುದೀಪ್ ಮರಳಿ ವೇದಿಕೆಗೆ ಬಂದಾಗ ಮನೆಯ ಸದಸ್ಯರು ಅವರ ಬಳಿ ಕ್ಷಮೆ ಕೇಳಿದರು ಎನ್ನಲಾಗಿದೆ.
ಇದನ್ನೂ ಓದಿ: ದರ್ಶನ್ ಭೇಟಿಗೆ ಬಂದ ರಚಿತಾ ರಾಮ್: 2 ಗಂಟೆ ಕಾದರೂ ಭೇಟಿಗೆ ಸಿಗದ ಅವಕಾಶ
ಗಾನವಿ, ಮಂಜ, ಲಿಖಿತ್‌ಗೆ ವಿಶೇಷ ಕ್ಲಾಸ್
ಶನಿವಾರದ ಎಪಿಸೋಡ್‌ನಲ್ಲಿ ಸುದೀಪ್ ಅವರು ಗಾನವಿ, ಮಂಜ ಮತ್ತು ಲಿಖಿತ್ ಸೇರಿದಂತೆ ಕೆಲವು ಸ್ಪರ್ಧಿಗಳಿಗೆ ವಿಶೇಷವಾಗಿ ಎಚ್ಚರಿಕೆ ನೀಡಿದರು. ಮನೆಯೊಳಗಿನ ವಾಗ್ವಾದ, ತಾಳ್ಮೆಯ ಕೊರತೆ ಹಾಗೂ ಪರಸ್ಪರ ಗೌರವದ ಬಗ್ಗೆ ಸ್ಪರ್ಧಿಗಳಿಗೆ ತಿಳಿಸಿದರು.
ಈ ವೇಳೆ ಸುದೀಪ್ ಅವರ ಮಾತಿನ ಗುರಿ ಗಾನವಿ ಸೇರಿದಂತೆ ಪದೇಪದೇ ವಾದಕ್ಕೆ ಇಳಿಯುತ್ತಿದ್ದ ಕೆಲ ಸ್ಪರ್ಧಿಗಳತ್ತ ಇತ್ತು. “ಶೋ ನಡೆಸಲು ನೀವು ಬೇಕೇಬೇಕು ಎಂಬುದು ಇಲ್ಲ” ಎಂಬ ರೀತಿಯಲ್ಲಿ ಸುದೀಪ್ ನೀಡಿದ ಖಡಕ್ ಸಂದೇಶ ಇದೀಗ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದೆ.