ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂರನೇ ತರಗತಿಯ ವಿದ್ಯಾರ್ಥಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬ ಗಂಭೀರ ಆರೋಪ ಮಾಡಿದೆ. ಆರೋಪಿ ಬಾಲಕ PUBG ಸೇರಿದಂತೆ ಆಕ್ರಮಣಕಾರಿ ಆಟಗಳನ್ನು ಆಡುತ್ತಿದ್ದ. ಇಂತಹ ಆಟಗಳ ಪ್ರಭಾವದಿಂದಲೇ ಈ ಕೃತ್ಯ ಎಸಗಿರಬಹುದು ಎಂದು ಸಂತ್ರಸ್ತೆಯ ಚಿಕ್ಕಪ್ಪ ಫಾಜಿಲ್ ಆರೋಪಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಫಾಜಿಲ್, ಆರೋಪಿ ಬಾಲಕನ ತಂದೆಯೂ ತನ್ನ ಮಗ PUBG ಮತ್ತು ಇತರ ಆಕ್ರಮಣಕಾರಿ ಆಟಗಳನ್ನು ಆಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಆಟಗಳೇ ಈ ಘಟನೆಗೆ ಕಾರಣವೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಹಲ್ಲೆಗೂ ಮುನ್ನ ನಡೆದಿದ್ದೇನು?
ಬಾಲಕ ಮೊದಲು ಬಾಲಕಿಯನ್ನು ‘ಹುಚ್ಚಿ’ ಎಂದು ಕರೆದಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಲಕಿ, ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಾಳೆ. ಆಗ ಬಾಲಕ, ಆಕೆಯ ತಂದೆ ಮೇಲಿನ ಮಹಡಿಯಲ್ಲಿದ್ದಾರೆ ಎಂದು ಹೇಳಿ ತನ್ನೊಂದಿಗೆ ಬರುವಂತೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಬಾಲಕಿಯ ಆರೋಗ್ಯದಲ್ಲಿ ಚೇತರಿಕೆ
ಸಂತ್ರಸ್ತೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಫಾಜಿಲ್, ಕಳೆದ ಎರಡು-ಮೂರು ದಿನಗಳಿಂದ ಬಾಲಕಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಿದ್ದಾರೆ. ವೈದ್ಯರು ನಿರಂತರವಾಗಿ ಆಕೆಯ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಕಿಗೆ ಉತ್ತಮ ಆರೈಕೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
ಶಾಲೆ, ಆರೋಪಿ ಬಾಲಕನ ವಿರುದ್ಧ ಎಫ್ಐಆರ್
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ ಒಂದು ಎಫ್ಐಆರ್ ಹಾಗೂ ಆರೋಪಿ ಬಾಲಕನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹರಿಯಾಣ ಶಿಕ್ಷಣ ಇಲಾಖೆಯು ಇಬ್ಬರು ಜೆಬಿಟಿ ಶಿಕ್ಷಕರಾದ ಸಿಮ್ರನ್ಜೀತ್ ಕೌರ್ ಮತ್ತು ಪೂಜಾ ರಾಣಿ ಅವರನ್ನು ಅಮಾನತುಗೊಳಿಸಿದೆ.
ಇನ್ನು, ಹರಿಯಾಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಪಂಚಕುಲ ಜಿಲ್ಲಾ ಶಿಕ್ಷಣಾಧಿಕಾರಿಗೆ ಸೂಚಿಸಿದೆ.
ಶಾಲೆಯ ಭದ್ರತೆ ಬಗ್ಗೆ ಕುಟುಂಬದ ಪ್ರಶ್ನೆ
ಶಾಲೆಯ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಸಂತ್ರಸ್ತೆಯ ಕುಟುಂಬ ಪ್ರಶ್ನೆ ಎತ್ತಿದೆ. ಬಾಲಕಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆರೋಪಿ ಬಾಲಕನೇ ಕುಟುಂಬದವರನ್ನು ಆಕೆಯ ಬಳಿಗೆ ಕರೆದೊಯ್ದಿದ್ದ ಎಂದು ಕುಟುಂಬ ಹೇಳಿದೆ.
ಪ್ರಾಂಶುಪಾಲರ ಕಚೇರಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರೂ, ಹಲ್ಲೆ ನಡೆದಿರುವುದು ಯಾರ ಗಮನಕ್ಕೂ ಏಕೆ ಬರಲಿಲ್ಲ ಎಂದು ಕುಟುಂಬ ಪ್ರಶ್ನಿಸಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಹಲ್ಲೆಯ ಹಿಂದಿನ ನೈಜ ಕಾರಣ ಹಾಗೂ ಶಾಲೆಯ ಭದ್ರತಾ ಲೋಪಗಳ ಬಗ್ಗೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.