ಸ್ಟಿಂಗ್ ವಿವಾದದ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ–ಸಿದ್ದರಾಮಯ್ಯ ಮಹತ್ವದ ಭೇಟಿ

ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದು, ಇಬ್ಬರು ನಾಯಕರ ಮಾತುಕತೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಂಜೆ ನಡೆಯಲಿರುವ ಈ ಭೇಟಿಯಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ. ಮಹಿಳೆಯೊಬ್ಬರ ಸಂದರ್ಶನದ ಸುತ್ತ ಸೃಷ್ಟಿಯಾದ ವಿವಾದ, ಅದರಲ್ಲಿ ತಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಿರುವ ಆರೋಪ ಮತ್ತು ಬ್ಲ್ಯಾಕ್‌ಮೇಲ್ ಯತ್ನದ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಸ್ವಪಕ್ಷೀಯರೇ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಪೊಲೀಸ್ ತನಿಖೆ ಸಮಗ್ರವಾಗಿ ನಡೆಯಬೇಕು ಮತ್ತು ಇದರ ಹಿಂದಿರುವವರನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸುವ ಸಾಧ್ಯತೆಯಿದೆ. ತಮ್ಮ ರಾಜಕೀಯ ಬದುಕಿಗೆ ಕಳಂಕ ತರಲು ಷಡ್ಯಂತ್ರ ನಡೆಸಲಾಗಿದೆ ಎಂಬ ಅಸಮಾಧಾನವನ್ನೂ ಹೈಕಮಾಂಡ್ ಮುಂದೆ ವ್ಯಕ್ತಪಡಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಸ್ಟಿಂಗ್ ವಿವಾದದ ಜೊತೆಗೆ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಎರಡು ಸಚಿವ ಸ್ಥಾನಗಳ ಭರ್ತಿ ಹಾಗೂ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆಯಿದೆ. ಈ ಹುದ್ದೆಗಳ ಆಕಾಂಕ್ಷಿಗಳ ಪಟ್ಟಿಯ ಬಗ್ಗೆಯೂ ಇಬ್ಬರು ನಾಯಕರು ಸಮಾಲೋಚನೆ ನಡೆಸಬಹುದು ಎಂದು ಹೇಳಲಾಗುತ್ತಿದೆ.

ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಿದ್ದರು. ಆದರೆ, ಆ ಭೇಟಿ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚರ್ಚೆಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಇಂದು ನಡೆಯಲಿರುವ ಮಾತುಕತೆ ಮಹತ್ವ ಪಡೆದುಕೊಂಡಿದೆ.

Leave a Reply

Your email address will not be published. Required fields are marked *