ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ಮದುವೆ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ಕೆಲವರು ಕೂಗಿ ಗದ್ದಲ ಸೃಷ್ಟಿಸುತ್ತಿರುವುದಕ್ಕೆ ಕಡಿವಾಣ ಹಾಕಲು ನಟ ದರ್ಶನ್ ಅವರ ಅಧಿಕೃತ ಬಳಗ ಮುಂದಾಗಿದೆ. ಇತರ ನಟರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅಪ್ರಸ್ತುತವಾಗಿ ‘ಡಿ-ಬಾಸ್’ ಎಂದು ಘೋಷಣೆ ಕೂಗಿ ಮುಜುಗರ ಉಂಟುಮಾಡಬಾರದು ಎಂದು ‘ಡಿ ಕಂಪನಿ’ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದೆ.
ಮಂಡ್ಯ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿ ಗದ್ದಲ
ಕಳೆದ ಭಾನುವಾರ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ ಮತ್ತು ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದರು. ಈ ವೇಳೆ ಕೆಲವರು ಅನಗತ್ಯವಾಗಿ ‘ಡಿ-ಬಾಸ್… ಡಿ-ಬಾಸ್’ ಎಂದು ಕೂಗಿ ಗದ್ದಲ ಸೃಷ್ಟಿಸಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕ ರವಿ ಗಣಿಗ, ಅಭಿಮಾನಿಗಳ ವರ್ತನೆಯ ಬಗ್ಗೆ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು.
“ನೀವೆಲ್ಲ ಈ ರೀತಿ ಅತಿಯಾಗಿ ಕಿರುಚಾಡಿ, ಅತಿರೇಕ ತೋರಿದ್ದರಿಂದಲೇ ದರ್ಶನ್ ಇವತ್ತು ಜೈಲು ಸೇರುವಂತಾಯಿತು” ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಡಿಕೆಶಿ ಕಾರ್ಯಕ್ರಮದಲ್ಲೂ ಇದೇ ರೀತಿಯ ಘಟನೆ
ಇದಕ್ಕೂ ಮೊದಲು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕೆಲವರು ‘ಡಿ-ಬಾಸ್’ ಎಂದು ಘೋಷಣೆ ಕೂಗಿದ್ದರು. ಆಗ ಡಿ.ಕೆ. ಶಿವಕುಮಾರ್ ಕೂಡ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನು ಮದುವೆ ಸಮಾರಂಭವೊಂದರಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಕಂಡಾಗಲೂ ಕೆಲವರು ಇದೇ ರೀತಿ ಘೋಷಣೆ ಕೂಗಿದ್ದರು. ಆಗ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ಮನವಿ ಮಾಡಿ, “ದಯವಿಟ್ಟು ಹೀಗೆಲ್ಲ ಕೂಗಬೇಡಿ. ಇಂಥ ನಡವಳಿಕೆಗಳಿಂದಲೇ ಅವರಿಗೆ ತೊಂದರೆಯಾಗುತ್ತಿದೆ” ಎಂದು ಹೇಳಿದ್ದರು ಎನ್ನಲಾಗಿದೆ.
ಅಭಿಮಾನಿಗಳಿಗೆ ಡಿ ಕಂಪನಿ ಮನವಿ
ಮಂಡ್ಯದಲ್ಲಿ ನಡೆದ ಘಟನೆಯ ಬೆನ್ನಲ್ಲೇ ದರ್ಶನ್ ಅವರ ಅಧಿಕೃತ ಡಿಜಿಟಲ್ ವೇದಿಕೆಯಾದ ‘ಡಿ ಕಂಪನಿ’ ಅಭಿಮಾನಿಗಳಿಗೆ ಸಂದೇಶ ನೀಡಿದೆ. ಬೇರೆ ನಟರ ಸಿನಿಮಾ ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳು ಅಥವಾ ಗಣ್ಯರು ಭಾಗವಹಿಸುವ ವೇದಿಕೆಗಳಲ್ಲಿ ದರ್ಶನ್ ಹೆಸರನ್ನು ಅನಗತ್ಯವಾಗಿ ಕೂಗಬಾರದು ಎಂದು ಮನವಿ ಮಾಡಿದೆ.
ನೆಚ್ಚಿನ ನಟನ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ತಾಳ್ಮೆಯಿಂದ ವ್ಯಕ್ತಪಡಿಸಬೇಕು. ದರ್ಶನ್ ಅವರ ಪ್ರಸ್ತುತ ಕಾನೂನು ಪರಿಸ್ಥಿತಿಯನ್ನೂ ಅಭಿಮಾನಿಗಳು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಡಿ ಕಂಪನಿಯ ಈ ಮನವಿಯ ಬಳಿಕವಾದರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರರಿಗೆ ಮುಜುಗರ ಉಂಟುಮಾಡುವ ರೀತಿಯ ಘೋಷಣೆಗಳು ಕಡಿಮೆಯಾಗುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ.
One thought on “‘ಡಿ-ಬಾಸ್’ ಘೋಷಣೆ ಕೂಗಬೇಡಿ; ಅಭಿಮಾನಿಗಳಿಗೆ ಡಿ ಕಂಪನಿ ಎಚ್ಚರಿಕೆ”