ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಬಂದಿದ್ದ ನಟಿ ರಚಿತಾ ರಾಮ್ ನಿರಾಸೆಯಿಂದ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 1ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ರಚಿತಾ ರಾಮ್, ಸುಮಾರು ಎರಡು ಗಂಟೆಗಳ ಕಾಲ ಜೈಲಿನ ಆವರಣದಲ್ಲಿ ಕಾದಿದ್ದರು ಎನ್ನಲಾಗಿದೆ.
ದರ್ಶನ್ ಅವರನ್ನು ಭೇಟಿ ಮಾಡಲು ರಚಿತಾ ರಾಮ್ ಅವರು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಈ ವಿಚಾರವನ್ನು ಅಧಿಕಾರಿಗಳು ದರ್ಶನ್ ಅವರ ಗಮನಕ್ಕೆ ತಂದಾಗ, ಸದ್ಯ ಯಾರನ್ನೂ ಭೇಟಿಯಾಗಲು ಇಚ್ಛಿಸುವುದಿಲ್ಲ ಎಂದು ಅವರು ತಿಳಿಸಿದ್ದರು ಎನ್ನಲಾಗಿದೆ. ಹೀಗಾಗಿ ಭೇಟಿಗೆ ಅವಕಾಶ ಸಿಗದೆ ರಚಿತಾ ರಾಮ್ ಅವರು ಅಲ್ಲಿಂದ ವಾಪಸ್ ತೆರಳಿದ್ದಾರೆ.
ಕುಟುಂಬಸ್ಥರಿಗೆ ಮಾತ್ರ ಭೇಟಿಯ ಅವಕಾಶ?
ಪ್ರಸ್ತುತ ದರ್ಶನ್ ಅವರು ತಮ್ಮ ಕುಟುಂಬದ ಕೆಲ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿಯಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಚಿತ್ರರಂಗದ ಆಪ್ತರು ಮತ್ತು ಸ್ನೇಹಿತರು ಭೇಟಿ ಮಾಡಲು ಬಂದರೂ ಅವರನ್ನು ಭೇಟಿಯಾಗಲು ದರ್ಶನ್ ನಿರಾಕರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಲಕ್ಷಕ್ಕೂ ಅಧಿಕ ವೇತನದ ಸರ್ಕಾರಿ ಉದ್ಯೋಗ: IGNOUನಲ್ಲಿ 43 ಹುದ್ದೆಗಳಿಗೆ ಅರ್ಜಿ ಆಹ್ವಾನ
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ಹಲವು ವಿಚಾರಗಳು ತನಿಖೆಯ ಭಾಗವಾಗಿವೆ.
ಈ ನಡುವೆ ಸಹ-ಆರೋಪಿಯಾಗಿದ್ದ ಪ್ರದೋಷ್ ರಾವ್ ಅವರು ಮಾಫಿ ಸಾಕ್ಷಿಯಾಗಿದ್ದಾರೆ ಎಂಬ ವರದಿಗಳೂ ಬಂದಿವೆ. ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹುಟ್ಟುಹಬ್ಬಕ್ಕೂ ಮುನ್ನ ಭೇಟಿ ಆಗಬೇಕು ಎಂದುಕೊಂಡಿದ್ದ ರಚಿತಾ
ರಚಿತಾ ರಾಮ್ ಅವರಿಗೆ ದರ್ಶನ್ ಬಗ್ಗೆ ಗೌರವವಿದ್ದು, ಈ ಹಿಂದೆ ಕೂಡ ಅವರು ಜೈಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಅಕ್ಟೋಬರ್ 3ರಂದು ರಚಿತಾ ರಾಮ್ ಅವರ ಹುಟ್ಟುಹಬ್ಬವಿದೆ.
ಹುಟ್ಟುಹಬ್ಬಕ್ಕೂ ಮುನ್ನ ದರ್ಶನ್ ಅವರನ್ನು ಒಮ್ಮೆ ಭೇಟಿಯಾಗಿ ಮಾತನಾಡಿಕೊಂಡು ಹೋಗಬೇಕು ಎಂದು ಅವರು ಬಯಸಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ನಿರಾಸೆಯಿಂದಲೇ ವಾಪಸ್ ತೆರಳಿದ್ದಾರೆ.
ಇದನ್ನೂ ಓದಿ: ಮಲಗುವ ಕೋಣೆಯಲ್ಲಿ ಈ 4 ಸಸ್ಯಗಳನ್ನಿಡಿ; ನಿದ್ರೆ ಚೆನ್ನಾಗಿರುತ್ತೆ, ಮನಸ್ಸಿಗೂ ರಿಲ್ಯಾಕ್ಸ್!