ಟೀ ಕುಡಿಯುವಾಗ ಈ ತಪ್ಪು ಮಾಡಿದ್ರೆ ವಿಷ ಕುಡಿದಂತೆ..

ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಕುಡಿಯೋದು ಬಹುತೇಕ ಜನರ ದಿನಚರಿಯ ಭಾಗ. ಕೆಲಸಕ್ಕೆ ಹೋಗುವ ಮುನ್ನ ಒಂದು ಕಪ್, ಮತ್ತೆ ಕೆಲ ಗಂಟೆಗಳ ನಂತರ ಇನ್ನೊಂದು ಕಪ್ ಹೀಗೆ ಟೀ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಬೆಳಗ್ಗೆ ಮಾಡಿದ ಟೀಯನ್ನೇ ಗಂಟೆಗಳ ಬಳಿಕ ಮತ್ತೆ ಬಿಸಿ ಮಾಡಿಕೊಂಡು ಕುಡಿಯುವ ಅಭ್ಯಾಸ ನಿಮಗಿದ್ದರೆ ಸ್ವಲ್ಪ ಎಚ್ಚರ ಇರಬೇಕು.

ವಿಶೇಷವಾಗಿ ಹಾಲು ಮತ್ತು ಸಕ್ಕರೆ ಹಾಕಿ ಮಾಡಿದ ಟೀಯನ್ನು ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಹೊತ್ತು ಇಡುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳಿದ್ದಾರೆ. ಟೀ ಹೆಚ್ಚು ಹೊತ್ತು ಹೊರಗಡೆ ಇದ್ದರೆ ಸೂಕ್ತ ತಾಪಮಾನದಲ್ಲಿ ಬ್ಯಾಕ್ಟೀರಿಯಾ ಸೇರಿದಂತೆ ಸೂಕ್ಷ್ಮಜೀವಿಗಳು ಬೆಳೆಯುವ ಸಾಧ್ಯತೆ ಇರುತ್ತದೆ.

ವಾರಂಗಲ್‌ನ ಪಲ್ಲವಿ ಆಸ್ಪತ್ರೆಯ ಸಾಮಾನ್ಯ ವೈದ್ಯ ಡಾ. ಪವನ್ ಕುಮಾರ್ ಅವರ ಪ್ರಕಾರ, ಉಳಿದ ಟೀಯನ್ನು ನಂತರ ಬಿಸಿ ಮಾಡಿದ ಮಾತ್ರಕ್ಕೆ ಅದು ಸಂಪೂರ್ಣ ಸುರಕ್ಷಿತವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಟೀಯನ್ನು ಎಷ್ಟು ಸಮಯ ಹಾಗೂ ಯಾವ ಪರಿಸ್ಥಿತಿಯಲ್ಲಿ ಇಡಲಾಗಿದೆ ಎಂಬುದೂ ಮುಖ್ಯ.

ಹಾಲು ಇರುವ ಟೀ ಬಗ್ಗೆ ಇನ್ನಷ್ಟು ಎಚ್ಚರಿಕೆ ಅಗತ್ಯ. ಹಾಲು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅನುಕೂಲವಾಗಿರುವುದರಿಂದ ಸರಿಯಾಗಿ ಸಂಗ್ರಹಿಸದ ಟೀ ಹಾಳಾಗಬಹುದು. ಇಂತಹ ಟೀ ಕುಡಿದರೆ ಹೊಟ್ಟೆ ನೋವು, ವಾಂತಿ, ಅತಿಸಾರದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಇನ್ನು ಟೀಯನ್ನು ಪದೇಪದೇ ಬಿಸಿ ಮಾಡುವುದರಿಂದ ರುಚಿ ಮತ್ತು ಪರಿಮಳವೂ ಬದಲಾಗಬಹುದು. ಹಸಿರು ಟೀ ಹಾಗೂ ಗಿಡಮೂಲಿಕೆ ಟೀಯನ್ನು ಹೆಚ್ಚು ಹೊತ್ತು ಇಟ್ಟು ಮತ್ತೆ ಬಿಸಿ ಮಾಡಿದರೆ ಅದರ ತಾಜಾತನ ಮತ್ತು ರುಚಿ ಕಡಿಮೆಯಾಗಬಹುದು.

ಬಹುತೇಕರು ಟೀ ಉಳಿದರೆ ವ್ಯರ್ಥವಾಗುತ್ತದೆ ಎಂದುಕೊಂಡು ಬೆಳಗ್ಗೆಯೇ ಎರಡು-ಮೂರು ಕಪ್ ಮಾಡಿ ಇಟ್ಟುಕೊಳ್ಳುತ್ತಾರೆ. ನಂತರ ಬೇಕಾದಾಗ ಬಿಸಿ ಮಾಡಿಕೊಂಡು ಕುಡಿಯುತ್ತಾರೆ. ಆದರೆ ಈ ಅಭ್ಯಾಸ ಬದಲಿಸಿಕೊಂಡು ಆ ಸಮಯಕ್ಕೆ ಬೇಕಾದಷ್ಟು ಮಾತ್ರ ಟೀ ತಯಾರಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ, ಟೀ ಕುಡಿಯೋದರಲ್ಲಿ ತಪ್ಪಿಲ್ಲ. ಆದರೆ ಬೆಳಗ್ಗೆ ಮಾಡಿದ ಟೀಯನ್ನು ಗಂಟೆಗಟ್ಟಲೆ ಇಟ್ಟುಕೊಂಡು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸವಿದ್ದರೆ ಅದನ್ನು ಬದಲಾಯಿಸುವುದು ಒಳ್ಳೆಯದು. ಹೊಸದಾಗಿ ತಯಾರಿಸಿದ ಟೀಯನ್ನು ಸಾಧ್ಯವಾದಷ್ಟು ಬೇಗ ಕುಡಿಯುವುದು ಆರೋಗ್ಯ ಹಾಗೂ ರುಚಿಯ ದೃಷ್ಟಿಯಿಂದ ಉತ್ತಮ ಆಯ್ಕೆ

Leave a Reply

Your email address will not be published. Required fields are marked *