ಶಾಸ್ತ್ರಿ’, ‘ಶಂಭು’, ‘ವರ್ಷ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಾನ್ಯ ನಾಯ್ಡು ಅವರ ಬದುಕಿನ ಪಯಣ ನಿಜಕ್ಕೂ ಅನೇಕರಿಗೆ ಸ್ಫೂರ್ತಿ. ದರ್ಶನ್, ಶ್ರೀಮುರಳಿ, ವಿಷ್ಣುವರ್ಧನ್ ಹಾಗೂ ಆದಿತ್ಯ ಅವರಂತಹ ನಟರ ಜೊತೆ ತೆರೆ ಹಂಚಿಕೊಂಡಿರುವ ಮಾನ್ಯ, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದ ಅವರು, ಬಳಿಕ ನಟನೆಯಿಂದ ದೂರ ಸರಿದು ಉನ್ನತ ಶಿಕ್ಷಣ ಪಡೆದು ಅಮೆರಿಕದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ತಂದೆಯ ಸಾವು, ಕುಟುಂಬದ ಜವಾಬ್ದಾರಿ, IVF ಚಿಕಿತ್ಸೆ, ಕ್ಯಾನ್ಸರ್ನಂತಹ ಸವಾಲುಗಳನ್ನು ಎದುರಿಸಿದ ಅವರ ಜೀವನದ ಕಥೆ ಈಗ ಮತ್ತೆ ಚರ್ಚೆಯಾಗುತ್ತಿದೆ.
ತೆಲುಗು ಚಿತ್ರರಂಗದ ಪತ್ರಕರ್ತೆ ಪ್ರೇಮಾ ಅವರು ಇತ್ತೀಚೆಗೆ ನ್ಯೂಯಾರ್ಕ್ನಲ್ಲಿರುವ ಮಾನ್ಯ ಅವರ ನಿವಾಸದಲ್ಲಿ ಸಂದರ್ಶನ ನಡೆಸಿದ್ದಾರೆ. ಈ ವೇಳೆ ತಮ್ಮ ಬದುಕಿನಲ್ಲಿ ಎದುರಿಸಿದ ಕಷ್ಟಗಳು, ತಾಯ್ತನದ ಪಯಣ ಮತ್ತು ವೃತ್ತಿಜೀವನದ ಬಗ್ಗೆ ಮಾನ್ಯ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
14ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ನೋವು
ಮಾನ್ಯ ಅವರ ತಂದೆ ಲಂಡನ್ನಲ್ಲಿ ಹೃದ್ರೋಗ ತಜ್ಞರಾಗಿದ್ದರು. ಕರ್ನಾಟಕದ ಬಳ್ಳಾರಿಯಲ್ಲಿ ಕುಟುಂಬದ ಗಣಿಗಾರಿಕೆ ವ್ಯವಹಾರವಿದ್ದ ಕಾರಣ, ಅಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ಆರಂಭಿಸುವ ಆಸೆ ಅವರಿಗಿತ್ತು. ಇದೇ ಉದ್ದೇಶದಿಂದ ಕುಟುಂಬ ಭಾರತಕ್ಕೆ ಮರಳಿತ್ತು. ಆದರೆ ಮಾನ್ಯ ಅವರಿಗೆ 14 ವರ್ಷವಾಗಿದ್ದಾಗಲೇ ತಂದೆ ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ ಆಗ ಕೇವಲ 42 ವರ್ಷ ವಯಸ್ಸಾಗಿತ್ತು. ವೈದ್ಯರಾಗಿದ್ದರೂ ಅತಿಯಾದ ಧೂಮಪಾನದ ಅಭ್ಯಾಸದಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು ಎಂದು ಮಾನ್ಯ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ತಂದೆಯ ನಿಧನದ ಬಳಿಕ ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿತು. ಸಂಬಂಧಿಕರು ಆಸ್ತಿಯನ್ನು ಪಡೆದುಕೊಂಡರು ಎಂದು ಮಾನ್ಯ ಹೇಳಿದ್ದಾರೆ. ತಾಯಿ ಮತ್ತು ತನಗಿಂತ ಎರಡು ವರ್ಷ ಚಿಕ್ಕವಳಾದ ತಂಗಿಯ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ದುಡಿಯುವ ಅನಿವಾರ್ಯತೆ ಎದುರಾಯಿತು.
16ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ
10ನೇ ತರಗತಿ ಮುಗಿಸಿದ ಬಳಿಕ ಮಾನ್ಯ 16ನೇ ವಯಸ್ಸಿನಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಾಗಾರ್ಜುನ ಅಕ್ಕಿನೇನಿ ಜೊತೆ ‘ಸೀತಾರಾಮರಾಜು’ ಸಿನಿಮಾದಲ್ಲಿ ನಟಿಸುವ ಮೂಲಕ ಗಮನ ಸೆಳೆದರು. ಬಳಿಕ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು.
‘ಶಾಸ್ತ್ರಿ’, ‘ಶಂಭು’, ‘ವರ್ಷ’ ಸೇರಿದಂತೆ ಒಟ್ಟು 41 ಸಿನಿಮಾಗಳಲ್ಲಿ ನಟಿಸಿದ ಅನುಭವ ಅವರಿಗಿದೆ. ಆದರೆ ಚಿತ್ರರಂಗದಲ್ಲಿ ಅವಕಾಶಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎಂಬುದನ್ನು ಅರಿತ ಮಾನ್ಯ, ತಮ್ಮ ಭವಿಷ್ಯಕ್ಕಾಗಿ ಮತ್ತೊಂದು ನಿರ್ಧಾರ ಕೈಗೊಂಡರು.
41 ಸಿನಿಮಾಗಳ ಬಳಿಕ ಮತ್ತೆ ಓದಿನತ್ತ ಮುಖ
ಸುಮಾರು 20ನೇ ವಯಸ್ಸಿನಲ್ಲಿ ನಟನೆಯಿಂದ ವಿರಾಮ ಪಡೆದು ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದರು. ಸಿನಿಮಾಗಳಿಂದ ಗಳಿಸಿದ್ದ ಹಣವನ್ನು ತಾಯಿ ಮತ್ತು ತಂಗಿಯ ಜವಾಬ್ದಾರಿಗೆ ಮೀಸಲಿಟ್ಟು, ಲಂಡನ್ಗೆ ತೆರಳಿ ಓದನ್ನು ಮುಂದುವರಿಸಿದರು.
10ನೇ ತರಗತಿಯ ಬಳಿಕ ನಿಂತಿದ್ದ ವಿದ್ಯಾಭ್ಯಾಸವನ್ನು ಮತ್ತೆ ಆರಂಭಿಸುವುದು ಸುಲಭವಾಗಿರಲಿಲ್ಲ. ಆದರೆ ಗಣಿತ ವಿಷಯದಲ್ಲಿ ಆಸಕ್ತಿ ಹೊಂದಿದ್ದ ಅವರು ಕಷ್ಟಪಟ್ಟು ಓದಿದರು. ಬಳಿಕ ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಪಡೆದು ಉನ್ನತ ಶಿಕ್ಷಣ ಮುಂದುವರಿಸಿದರು.
ಐವಿಎಫ್ ಮೂಲಕ ತಾಯಿಯಾದ ಮಾನ್ಯ
2013ರಲ್ಲಿ ಮಾನ್ಯ ಅವರು ವಿಕಾಸ್ ಬಾಜಪೈ ಅವರನ್ನು ಪ್ರೀತಿಸಿ ಮದುವೆಯಾದರು. ಕಾಲೇಜು ದಿನಗಳಲ್ಲೇ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ದಂಪತಿಗೆ 2016ರಲ್ಲಿ ಹೆಣ್ಣು ಮಗು ಜನಿಸಿತು.
ಆದರೆ ತಾಯಿಯಾಗುವ ಪಯಣ ಸುಲಭವಾಗಿರಲಿಲ್ಲ. ಮಗುವಿಗಾಗಿ ಐವಿಎಫ್ ಚಿಕಿತ್ಸೆ ಪಡೆಯಬೇಕಾಯಿತು. ಐದು ಬಾರಿ ಗರ್ಭಧಾರಣೆಯ ಪ್ರಯತ್ನ ವಿಫಲವಾದರೂ ಮಾನ್ಯ ಭರವಸೆ ಕಳೆದುಕೊಳ್ಳಲಿಲ್ಲ. ಹಲವು ನೋವು ಮತ್ತು ಸವಾಲುಗಳ ಬಳಿಕ ಹೆಣ್ಣು ಮಗು ಒಮಿಷ್ಕಾ ಜನಿಸಿದಳು ಎಂದು ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕ್ಯಾನ್ಸರ್ ವಿರುದ್ಧವೂ ಹೋರಾಟ
ಬದುಕಿನಲ್ಲಿ ಒಂದೊಂದೇ ಸವಾಲುಗಳನ್ನು ಎದುರಿಸಿ ಮುಂದೆ ಸಾಗುತ್ತಿದ್ದ ಮಾನ್ಯ ಅವರಿಗೆ ಕ್ಯಾನ್ಸರ್ ಕಾಯಿಲೆಯೂ ಎದುರಾಯಿತು. ಈ ಕುರಿತು ಅವರು ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಮಾನ್ಯ ನ್ಯೂಯಾರ್ಕ್ನಲ್ಲಿ ತಮ್ಮ ಮಗಳು ಒಮಿಷ್ಕಾ ಜೊತೆ ವಾಸಿಸುತ್ತಿದ್ದಾರೆ. ಅವರ ಪತಿ ವಿಕಾಸ್ ಬಾಜಪೈ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ನೆಲೆಸಿರುವ ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮಾನ್ಯ ತಿಳಿಸಿದ್ದಾರೆ.
ಈಗ ಸಿಟಿ ಬ್ಯಾಂಕ್ನಲ್ಲಿ ಉನ್ನತ ಹುದ್ದೆ!
ಚಿತ್ರರಂಗದಲ್ಲಿ 41 ಸಿನಿಮಾಗಳಲ್ಲಿ ನಟಿಸಿದ್ದ ಮಾನ್ಯ ಇಂದು ಅಮೆರಿಕದ ನ್ಯೂಯಾರ್ಕ್ನಲ್ಲಿ ಸಿಟಿ ಬ್ಯಾಂಕ್ನಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಾರ್ಷಿಕ ಸಂಬಳ ಸುಮಾರು 6 ಕೋಟಿ ರೂಪಾಯಿಗೂ ಅಧಿಕ ಎಂದು ಸಂದರ್ಶನದಲ್ಲಿ ಉಲ್ಲೇಖಿಸಲಾಗಿದೆ. ನಟಿ ಅನುಷ್ಕಾ ಶೆಟ್ಟಿ ಅವರ ಸಿನಿಮಾ ಸಂಭಾವನೆಗಿಂತಲೂ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.
ನಟಿಯಾಗಿ ಗುರುತಿಸಿಕೊಂಡಿದ್ದರೂ ಅಲ್ಲಿಯೇ ಬದುಕನ್ನು ಸೀಮಿತಗೊಳಿಸಿಕೊಳ್ಳದೆ, ವಿದ್ಯಾಭ್ಯಾಸ ಮುಂದುವರಿಸಿ ಹೊಸ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾನ್ಯ ನಾಯ್ಡು ಅವರ ಪಯಣ ಹಲವರಿಗೆ ಸ್ಫೂರ್ತಿಯಾಗಿದೆ.