Bigg Boss Kannada 13: ಬಿಗ್ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಗಳ ವರ್ತನೆಗೆ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮನೆಯ ಕೆಲಸ ಮಾಡುವ ವಿಚಾರದಲ್ಲಿ ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಪಾತ್ರೆ ತೊಳೆಯುವ ವಿಚಾರಕ್ಕೆ ಮನೆಯಲ್ಲಿ ನಡೆಯುತ್ತಿರುವ ಗಲಾಟೆಯನ್ನು ಕಂಡು ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಾತ್ರೆ ತೊಳೆಯಲು ಯಾರಿಗೂ ಇಷ್ಟವಿಲ್ಲ!
ಬಿಗ್ಬಾಸ್ ಮನೆಯಲ್ಲಿ ಯಾರು ಕ್ಯಾಪ್ಟನ್ ಆದರೂ ಮನೆಕೆಲಸದ ವಿಚಾರಕ್ಕೆ ಜಗಳ ನಡೆಯುವುದು ಸಾಮಾನ್ಯವಾಗಿದೆ. ಅದರಲ್ಲೂ ಪಾತ್ರೆ ತೊಳೆಯುವ ಜವಾಬ್ದಾರಿ ಬಂದಾಗ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತಿದೆ.
ಗಗನ್ ಪಾತ್ರೆ ತೊಳೆಯಲು ಹಿಂದೇಟು ಹಾಕುತ್ತಿರುವ ವಿಚಾರವೂ ಈ ಹಿಂದೆ ಚರ್ಚೆಯಾಗಿತ್ತು. ಗಗನ್ ಕ್ಯಾಪ್ಟನ್ ಆಗಿದ್ದಾಗ ಪಾತ್ರೆ ತೊಳೆಯುವ ವಿಚಾರಕ್ಕೆ ಆಸಿಯಾ ಜೊತೆ ಜಗಳವಾಗಿತ್ತು. ಇನ್ನು ಸೌಂದರ್ಯಾ ಕ್ಯಾಪ್ಟನ್ಸಿಯಲ್ಲೂ ಇದೇ ವಿಚಾರಕ್ಕೆ ಗಗನ್ ಮತ್ತು ಸೌಂದರ್ಯಾ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗೆ ಸಣ್ಣ ವಿಚಾರವೂ ಮನೆಯಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ.
‘ನಾನು ಪಾತ್ರೆ ತೊಳೆಯುತ್ತೇನೆ’
ಈ ವಿಚಾರವನ್ನು ನಿನ್ನೆ ಸುದೀಪ್ ಪ್ರಸ್ತಾಪಿಸಿದ್ದಾರೆ. ಇನ್ನು ಮುಂದೆ ಮನೆಯಲ್ಲಿ ಯಾರೂ ಪಾತ್ರೆ ತೊಳೆಯಬೇಡಿ. ನೀವು ಊಟ ಮಾಡಿದ ತಟ್ಟೆಯಲ್ಲೇ ಮತ್ತೆ ಊಟ ಮಾಡಿ. ಅದನ್ನು ಟಿಶ್ಯೂ ಪೇಪರ್ನಿಂದಲೂ ಸ್ವಚ್ಛ ಮಾಡಬೇಡಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮನೆಕೆಲಸ ಮಾಡುವುದು ನಾಚಿಕೆಪಡುವ ವಿಷಯವಲ್ಲ ಎಂದು ಸ್ಪರ್ಧಿಗಳಿಗೆ ತಿಳಿ ಹೇಳಿದ್ದಾರೆ. “ಪಾತ್ರೆ ತೊಳೆಯುವುದರಿಂದ ಏನಾದರೂ ಸಮಸ್ಯೆಯಾಗುತ್ತದೆಯಾ? ಇರುವ ನಾಲ್ಕು ಪಾತ್ರೆ ತೊಳೆಯಲು ಎಷ್ಟು ಗಲಾಟೆ ಮಾಡುತ್ತೀರಿ. ನಿಮಗೆ ಗೊತ್ತಿರಲಿ ಅಂತ ಒಂದು ಮಾತು ಹೇಳುತ್ತೇನೆ. ನಮ್ಮ ಮನೆಯಲ್ಲಿ ಪ್ರತಿದಿನ ನಾನೇ ಪಾತ್ರೆ ತೊಳೆಯುವುದು. ನಾನೇ ಅಡುಗೆ ಮಾಡಿಕೊಳ್ಳುತ್ತೇನೆ. ನಾನೇ ಪಾತ್ರೆ ತೊಳೆಯುತ್ತೇನೆ. ತರಕಾರಿಗಳನ್ನೂ ನಾನೇ ಕತ್ತರಿಸಿಕೊಳ್ಳುತ್ತೇನೆ” ಎಂದು ಸುದೀಪ್ ಹೇಳಿದ್ದಾರೆ.
ಈ ಮೂಲಕ ಮನೆಕೆಲಸವನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳುತ್ತಿರುವ ಸ್ಪರ್ಧಿಗಳಿಗೆ ಸುದೀಪ್ ತಮ್ಮದೇ ರೀತಿಯಲ್ಲಿ ಪಾಠ ಮಾಡಿದ್ದಾರೆ.