ದಸರಾ ಹಬ್ಬದ ಸಂಭ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ಬಾಸ್ ಕನ್ನಡ ಸೀಸನ್ 13ರ ಮನೆಗೆ ಎಂಟ್ರಿ ಕೊಟ್ಟಿದ್ದ ಅಗ್ನಿಪರೀಕ್ಷೆ ಖ್ಯಾತಿಯ ಕುಮಾರಿ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ನೇರ ಮಾತು ಮತ್ತು ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದ ಕುಮಾರಿ, ದೀಪಾವಳಿ ಹಬ್ಬಕ್ಕೂ ಮುನ್ನವೇ ಬಿಗ್ಬಾಸ್ ಜರ್ನಿ ಮುಗಿಸಿದ್ದಾರೆ.
ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ತಮ್ಮ ನೇರ ನುಡಿಯಿಂದಲೇ ಜನರ ಗಮನ ಸೆಳೆದಿದ್ದ ಕುಮಾರಿ, ಅದೇ ಸ್ವಭಾವವನ್ನು ಬಿಗ್ಬಾಸ್ ಮನೆಯಲ್ಲೂ ಮುಂದುವರಿಸಿದ್ದರು. ಆದರೆ ಕಳೆದ ಒಂದು ವಾರದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಟಾಸ್ಕ್ಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದು ಅವರ ಆಟದ ಮೇಲೆ ಪರಿಣಾಮ ಬೀರಿದ್ದು, ಈ ವಾರ ಎಲಿಮಿನೇಷನ್ ಆಗಿದ್ದಾರೆ.
ದಸರಾ ಹಬ್ಬಕ್ಕೆ ಮನೆಗೆ ಬಂದಿದ್ದ ಕುಮಾರಿ, ಲಕ್ಷ್ಮೀ!
ಬಿಗ್ಬಾಸ್ ಅಗ್ನಿಪರೀಕ್ಷೆಯ ಸ್ಪರ್ಧಿಗಳಾಗಿದ್ದ ಕುಮಾರಿ ಮತ್ತು ಲಕ್ಷ್ಮೀ, ದಸರಾ ಹಬ್ಬದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಮನೆಗೆ ಬಂದ ಬಳಿಕ ನಡೆದ ಲೂಟಿಕೋರರು ಮತ್ತು ಸೆಕ್ಯೂರಿಟಿ ಟಾಸ್ಕ್ಗಳಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅದೇ ವಾರ ಲಕ್ಷ್ಮೀ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದರು.
ಅನಾರೋಗ್ಯದಿಂದ ಆಟದಲ್ಲಿ ಹಿಂದೆ ಉಳಿದ ಕುಮಾರಿ
ಈ ವಾರ ಆಸಿಯಾ, ಧನುಷ್, ಗಗನ್, ಕಿರಣ್ ಶಾಸ್ತ್ರಿ, ಪ್ರಶಾಂತ್, ಜಗದೀಶ್ ಮತ್ತು ಕುಮಾರಿ ನಾಮಿನೇಟ್ ಆಗಿದ್ದರು. ನಾಮಿನೇಷನ್ ಟಾಸ್ಕ್ ಬಳಿಕ ಕುಮಾರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ನಂತರದ ಟಾಸ್ಕ್ಗಳಲ್ಲಿ ಅವರು ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗದಿರುವುದು ಅವರ ಎಲಿಮಿನೇಷನ್ಗೆ ಕಾರಣವಾಗಿರಬಹುದು.
ದಸರಾ ಹಬ್ಬದ ಸಂಭ್ರಮದಲ್ಲಿ ಬಿಗ್ಬಾಸ್ ಮನೆಗೆ ಬಂದಿದ್ದ ಕುಮಾರಿ, ದೀಪಾವಳಿಗೂ ಮುನ್ನವೇ ತಮ್ಮ ಆಟಕ್ಕೆ ವಿದಾಯ ಹೇಳಿದ್ದಾರೆ.