ಮನೆಯಲ್ಲಿ ಅಡುಗೆ ಮಾಡುವಾಗ ಹಾಲು ಉಕ್ಕಿ ಚೆಲ್ಲುವುದು, ಕೈಯಿಂದ ಉಪ್ಪಿನ ಡಬ್ಬಿ ಬೀಳುವುದು ಅಥವಾ ಪೂಜೆ ಮಾಡುವಾಗ ದೀಪ ಜಾರಿ ಬೀಳುವುದು ಸಾಮಾನ್ಯ. ಇಂತಹ ಘಟನೆಗಳು ನಡೆದಾಗ ಮನೆಯಲ್ಲಿರುವ ಹಿರಿಯರು ಕೆಲವೊಮ್ಮೆ ಇದು ಒಳ್ಳೆಯ ಸೂಚನೆಯಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದರಲ್ಲೂ ಉಪ್ಪು ಮತ್ತು ಹಾಲು ಪದೇ ಪದೆ ಚೆಲ್ಲಿದರೆ ಏನಾದರೂ ಸಮಸ್ಯೆ ಎದುರಾಗುತ್ತಾ ಎಂಬ ಅನುಮಾನ ಹಲವರಲ್ಲಿ ಇರುತ್ತದೆ. ಹಾಗಾದರೆ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ನಂಬಿಕೆಗಳು ಈ ಬಗ್ಗೆ ಏನು ಹೇಳುತ್ತವೆ? ತಿಳಿಯೋಣ.
ಕೈಯಿಂದ ಉಪ್ಪು ಬಿದ್ದರೆ ಏನರ್ಥ?
ಅಡುಗೆ ಮಾಡುವಾಗ ಉಪ್ಪಿನ ಡಬ್ಬಿ ಕೈಯಿಂದ ಜಾರಿ ಬೀಳುವುದು ಸಾಮಾನ್ಯ. ಆದರೆ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳ ಪ್ರಕಾರ, ಉಪ್ಪನ್ನು ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದ ವಸ್ತುವೆಂದು ಪರಿಗಣಿಸಲಾಗುತ್ತದೆ.
ಹೀಗಾಗಿ, ಕೈಯಿಂದ ಪದೇ ಪದೆ ಉಪ್ಪು ಬೀಳುವುದನ್ನು ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಎದುರಾಗುವ ಅಥವಾ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸೂಚನೆ ಎಂದು ಕೆಲವರು ನಂಬುತ್ತಾರೆ. ಇದೇ ಕಾರಣಕ್ಕೆ ಮನೆಯ ಹಿರಿಯರು ಉಪ್ಪನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಹೇಳುತ್ತಾರೆ. ಆದರೆ, ಉಪ್ಪು ಚೆಲ್ಲಿದರೆ ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ.
ಹಾಲು ಚೆಲ್ಲಿದರೆ ಮನೆಯಲ್ಲಿ ಅಶಾಂತಿ ಉಂಟಾಗುತ್ತಾ?
ಹಾಲು ಕಾಯಿಸುವಾಗ ಫೋನ್ ನೋಡುತ್ತಾ ಅಥವಾ ಬೇರೆ ಕೆಲಸದಲ್ಲಿ ತೊಡಗಿಕೊಂಡಾಗ ಅದು ಉಕ್ಕಿ ಒಲೆಯ ಮೇಲೆ ಚೆಲ್ಲುವುದು ಸಾಮಾನ್ಯ. ಆದರೆ, ಜ್ಯೋತಿಷ್ಯದ ಕೆಲವು ನಂಬಿಕೆಗಳ ಪ್ರಕಾರ, ಹಾಲನ್ನು ಚಂದ್ರನಿಗೆ ಸಂಬಂಧಿಸಿದ ವಸ್ತುವೆಂದು ಪರಿಗಣಿಸಲಾಗುತ್ತದೆ.
ಹೀಗಾಗಿ, ಹಾಲು ಪದೇ ಪದೆ ಚೆಲ್ಲುವುದನ್ನು ಮನೆಯಲ್ಲಿನ ಅಶಾಂತಿ ಅಥವಾ ಹಣಕಾಸಿಗೆ ಸಂಬಂಧಿಸಿದ ತೊಂದರೆಗಳ ಸೂಚನೆ ಎಂದು ಕೆಲವರು ನಂಬುತ್ತಾರೆ. ಆದರೆ, ಹಾಲು ಚೆಲ್ಲಿದ ತಕ್ಷಣ ಮನೆಯಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಹಾಲು ಉಕ್ಕದಂತೆ ಗಮನಿಸುವುದು ಮತ್ತು ಅಡುಗೆ ಮಾಡುವಾಗ ಎಚ್ಚರಿಕೆ ವಹಿಸುವುದು ಮುಖ್ಯ.
ಪೂಜೆ ಮಾಡುವಾಗ ದೀಪ ಕೈಯಿಂದ ಬಿದ್ದರೆ ಅಶುಭವೇ?
ಹಿಂದೂ ಧರ್ಮದಲ್ಲಿ ಪೂಜೆ ಮಾಡುವಾಗ ದೀಪ ಹಚ್ಚುವುದಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ, ಪೂಜೆ ಅಥವಾ ಆರತಿ ಮಾಡುವ ಸಂದರ್ಭದಲ್ಲಿ ದೀಪ ಕೈಯಿಂದ ಜಾರಿ ಬಿದ್ದರೆ ಕೆಲವರು ಆತಂಕಕ್ಕೆ ಒಳಗಾಗುತ್ತಾರೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂಜೆಯ ದೀಪ ಬೀಳುವುದನ್ನು ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ತೊಂದರೆ ಅಥವಾ ಆರ್ಥಿಕ ಸಂಕಷ್ಟದ ಸೂಚನೆ ಎಂದು ಕೆಲವರು ಪರಿಗಣಿಸುತ್ತಾರೆ. ಆದರೆ, ಇಂತಹ ಘಟನೆಗಳು ಭವಿಷ್ಯದಲ್ಲಿ ಕೆಟ್ಟದ್ದು ನಡೆಯುತ್ತದೆ ಎಂಬುದಕ್ಕೆ ಖಚಿತ ಸಂಕೇತವಲ್ಲ. ದೀಪ ಬೀಳಲು ಅಜಾಗರೂಕತೆ, ಜಾರುವ ನೆಲ ಅಥವಾ ಕೈಯಲ್ಲಿನ ಹಿಡಿತ ತಪ್ಪುವುದು ಕೂಡ ಕಾರಣವಾಗಿರಬಹುದು. ಆದ್ದರಿಂದ, ದೀಪವನ್ನು ಸುರಕ್ಷಿತವಾದ ಜಾಗದಲ್ಲಿ ಇಟ್ಟು ಪೂಜೆ ಮಾಡುವುದು ಉತ್ತಮ.
ಪೂಜೆಯ ತಟ್ಟೆ, ಹೂವು ಅಥವಾ ಕುಂಕುಮ ಬಿದ್ದರೆ ಏನು ಮಾಡಬೇಕು?
ಪೂಜೆ ಮಾಡುವಾಗ ತಟ್ಟೆ ಕೈಯಿಂದ ಜಾರುವುದು, ಹೂವುಗಳು ಕೆಳಗೆ ಬೀಳುವುದು ಅಥವಾ ಕುಂಕುಮ ಮತ್ತು ಅಕ್ಷತೆ ಚೆಲ್ಲುವುದು ಕೆಲವೊಮ್ಮೆ ಸಂಭವಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಧಾರ್ಮಿಕ ನಂಬಿಕೆಗಳ ಪ್ರಕಾರ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂಬ ನಂಬಿಕೆಯೂ ಇದೆ.
ಆದರೆ, ಇಂತಹ ಘಟನೆ ನಡೆದಾಗ ಗಾಬರಿಯಾಗುವ ಅಗತ್ಯವಿಲ್ಲ. ಶಾಂತವಾಗಿ ಬಿದ್ದಿರುವ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ, ಅಗತ್ಯವಿದ್ದರೆ ಮತ್ತೆ ಪೂಜೆಯನ್ನು ಮುಂದುವರಿಸಬಹುದು. ಪೂಜೆಯ ವೇಳೆ ಎಚ್ಚರಿಕೆ ವಹಿಸುವುದು ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಮುಖ್ಯ.
ಇಂತಹ ಘಟನೆಗಳು ನಡೆದರೆ ಭಯಪಡಬೇಕಾ?
ನಮ್ಮ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ವಸ್ತುಗಳು ಕೈಯಿಂದ ಬೀಳುವುದು ಅಥವಾ ಆಹಾರ ಪದಾರ್ಥಗಳು ಚೆಲ್ಲುವುದು ಸಹಜ. ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳು ಇಂತಹ ಘಟನೆಗಳಿಗೆ ವಿಶೇಷ ಅರ್ಥ ನೀಡುತ್ತವೆ. ಆದರೆ, ಉಪ್ಪು ಅಥವಾ ಹಾಲು ಚೆಲ್ಲುವುದರಿಂದ ಆರ್ಥಿಕ ನಷ್ಟವಾಗುತ್ತದೆ, ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ ಅಥವಾ ದೀಪ ಬೀಳುವುದರಿಂದ ಕೆಟ್ಟ ಘಟನೆ ನಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಹೀಗಾಗಿ, ಇಂತಹ ಘಟನೆಗಳು ನಡೆದಾಗ ಆತಂಕಪಡುವ ಬದಲು ಅದರ ನಿಜವಾದ ಕಾರಣವನ್ನು ಗಮನಿಸುವುದು ಉತ್ತಮ. ಮನೆಯ ಸ್ವಚ್ಛತೆ, ಅಡುಗೆ ಮಾಡುವಾಗ ಎಚ್ಚರಿಕೆ ಮತ್ತು ಪೂಜೆಯ ವೇಳೆ ಸುರಕ್ಷತೆಗೆ ಆದ್ಯತೆ ನೀಡಬೇಕು.
ಹಕ್ಕುತ್ಯಾಗ: ಈ ಲೇಖನದಲ್ಲಿನ ವಾಸ್ತು ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಅಂಶಗಳು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿವೆ. ಇವು ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳಲ್ಲ. ಮೂಢನಂಬಿಕೆಯನ್ನು ಉತ್ತೇಜಿಸುವುದು ನಮ್ಮ ಉದ್ದೇಶವಲ್ಲ.