ಬಿಜೆಪಿಯ ಕೇರಳ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಟ ದೇವನ್, ಇದೀಗ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಜಯ್ ಪಕ್ಷಕ್ಕೆ ಕೇರಳದಲ್ಲಿ ಸಿನಿಮಾ ಹಿನ್ನೆಲೆಯ ಪ್ರಮುಖ ಮುಖವೊಂದು ಸೇರ್ಪಡೆಯಾದಂತಾಗಿದೆ.
ಬಿಜೆಪಿಯ ರಾಜಕೀಯ ವಿಧಾನಗಳು ಶ್ರೀ ನಾರಾಯಣ ಗುರುಗಳ ಆದರ್ಶಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ದೇವನ್ ಪಕ್ಷ ತೊರೆದಿದ್ದರು. ಕೇರಳದ ಹಲವು ಯುವಕರು ಕೂಡ ಇದೇ ರೀತಿಯ ರಾಜಕೀಯ ಪರ್ಯಾಯವನ್ನು ಹುಡುಕುತ್ತಿದ್ದಾರೆ. ವಿಜಯ್ ಅವರ ರಾಜಕೀಯ ದೃಷ್ಟಿಕೋನವನ್ನು ತಾವು ಬೆಂಬಲಿಸುವುದಾಗಿ ದೇವನ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಸದ್ಯ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಕ್ರಿಯವಾಗಿರುವ TVK ಇದೀಗ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ತನ್ನ ಸಂಘಟನೆಯನ್ನು ವಿಸ್ತರಿಸಲು ಯೋಜನೆ ರೂಪಿಸುತ್ತಿದೆ. ಅದರ ಭಾಗವಾಗಿ ಕೇರಳವನ್ನು ಪ್ರಮುಖ ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.
ವಿಜಯ್ ಭೇಟಿಯಾಗಲಿರುವ ದೇವನ್?ದೇವನ್ ಶೀಘ್ರದಲ್ಲೇ ಚೆನ್ನೈಗೆ ತೆರಳಿ TVK ಮುಖ್ಯಸ್ಥ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿಯ ಬಳಿಕ ಕೇರಳದಲ್ಲಿ ದೇವನ್ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಅವರನ್ನು TVK ಕೇರಳ ಅಧ್ಯಕ್ಷ ಅಥವಾ ಸಂಯೋಜಕರಾಗಿ ನೇಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಂದೇ ವಾರದಲ್ಲಿ TVK ಸೇರ್ಪಡೆ
ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿದ್ದ ದೇವನ್ ಆಗಸ್ಟ್ 16ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನು ಉಲ್ಲೇಖಿಸಿ ಕಣಿಚುಕುಲಂಗರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಘೋಷಿಸಿದ್ದರು.
ತಮ್ಮ ರಾಜೀನಾಮೆ ಪತ್ರ ಸಿದ್ಧವಾಗಿದ್ದು, ಅದನ್ನು ಬಿಜೆಪಿ ರಾಜ್ಯ ನಾಯಕತ್ವಕ್ಕೆ ಸಲ್ಲಿಸುವುದಾಗಿ ಆಗ ತಿಳಿಸಿದ್ದರು. ಇದೀಗ ಕೇವಲ ಕೆಲವೇ ದಿನಗಳಲ್ಲಿ TVK ಸೇರ್ಪಡೆಯಾಗಿರುವುದು ಗಮನ ಸೆಳೆದಿದೆ.
ಸ್ವಂತ ಪಕ್ಷವನ್ನೂ ಕಟ್ಟಿದ್ದ ದೇವನ್
ದೇವನ್ 2004ರಲ್ಲಿ ಪೀಪಲ್ಸ್ ಪಾರ್ಟಿ ಎಂಬ ಸ್ವಂತ ರಾಜಕೀಯ ಪಕ್ಷವನ್ನು ಆರಂಭಿಸಿದ್ದರು. ಬಳಿಕ 2020ರಲ್ಲಿ ಅದನ್ನು ನವ ಕೇರಳ ಪೀಪಲ್ಸ್ ಪಾರ್ಟಿ ಎಂದು ಮರುನಾಮಕರಣ ಮಾಡಿದ್ದರು.
2021ರಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ನಂತರ ಬಿಜೆಪಿಯ ಕೇರಳ ಘಟಕದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿದ್ದರು.
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ದೇವನ್ ದಕ್ಷಿಣ ಭಾರತದ ಹಿರಿಯ ನಟರಲ್ಲಿ ಒಬ್ಬರು. 1985ರಲ್ಲಿ ಆರಂಭವಾದ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಕೇರಳದಲ್ಲಿ ಸಿನಿಮಾ ಕ್ಷೇತ್ರದ ಪರಿಚಿತ ಮುಖವಾಗಿರುವ ದೇವನ್ TVK ಸೇರ್ಪಡೆ ಪಕ್ಷಕ್ಕೆ ರಾಜಕೀಯದ ಜೊತೆಗೆ ಸ್ಟಾರ್ ಬಲವನ್ನೂ ನೀಡುವ ಸಾಧ್ಯತೆಯಿದೆ.