ನ.5ರಂದೇ ವಿಶ್ವಾದ್ಯಂತ ‘ರಾಮಾಯಣ ಪಾರ್ಟ್ 1’ ರಿಲೀಸ್‌! ದಸರಾಕ್ಕೆ ಅಡ್ವಾನ್ಸ್ ಬುಕಿಂಗ್ ಆರಂಭ

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಮಾಯಣ ಪಾರ್ಟ್ 1’ (Ramayana: Part One) ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿ ಘೋಷಣೆಯಾಗಿದೆ. ಈ ಹಿಂದೆ ಭಾರತದಲ್ಲಿ ನವೆಂಬರ್ 8ರಂದು ಬಿಡುಗಡೆಯಾಗಲಿದೆ ಎಂಬ ವರದಿಗಳು ಹರಿದಾಡಿದ್ದವು. ಇದೀಗ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ನವೆಂಬರ್ 5, 2026ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ ಎಂದು ಘೋಷಿಸಿದೆ.

ನವರಾತ್ರಿಯಂದು ಹೊಸ ಪೋಸ್ಟರ್ ಬಿಡುಗಡೆ

ನವರಾತ್ರಿಯ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಪೋಸ್ಟರ್‌ನಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವೀ ದುಬೆ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ.

‘ಇದು ರಾಮನ ಯುಗದ ಆರಂಭ’ ಎಂಬ ಅರ್ಥ ನೀಡುವ “Yeh Ram Ke Yug Ka Aarambh Hai” ಎಂಬ ಸಾಲಿನೊಂದಿಗೆ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾವನ್ನು ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ.

ದಸರಾಕ್ಕೆ ಅಡ್ವಾನ್ಸ್ ಬುಕಿಂಗ್ ಆರಂಭ

ಸಿನಿಮಾ ಬಿಡುಗಡೆ ದಿನಾಂಕದ ಜೊತೆಗೆ ಮುಂಗಡ ಟಿಕೆಟ್ ಬುಕಿಂಗ್ ಕುರಿತೂ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ದಸರಾ ಹಬ್ಬದಂದು ಅಡ್ವಾನ್ಸ್ ಬುಕಿಂಗ್ ಆರಂಭವಾಗಲಿದೆ ಎಂದು ಘೋಷಿಸಲಾಗಿದೆ. ನವೆಂಬರ್ 5ರಿಂದ ವಿಶ್ವದಾದ್ಯಂತದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಈ ಹಿಂದೆ ವಿದೇಶಿ ಮಾರುಕಟ್ಟೆ ಮತ್ತು ಭಾರತದಲ್ಲಿ ಸಿನಿಮಾ ಬಿಡುಗಡೆಯ ದಿನಾಂಕದ ಕುರಿತು ವಿಭಿನ್ನ ವರದಿಗಳು ಪ್ರಕಟವಾಗಿದ್ದವು. ಇದೀಗ ಚಿತ್ರತಂಡದ ಅಧಿಕೃತ ಪ್ರಕಟಣೆಯ ಮೂಲಕ ವಿಶ್ವಾದ್ಯಂತ ಬಿಡುಗಡೆಯ ದಿನಾಂಕ ನವೆಂಬರ್ 5 ಎಂಬುದು ಖಚಿತವಾಗಿದೆ.

ಇದನ್ನೂ ಓದಿ: ನೀರಿನ ಮೇಲೆ ತೇಲುವ ರಾಷ್ಟ್ರೀಯ ಉದ್ಯಾನವನ! ಭಾರತದಲ್ಲಿದೆ ಈ ಅದ್ಭುತ ತಾಣ

ಐದು ಭಾಷೆಗಳಲ್ಲಿ ‘ರಾಮಾಯಣ’ ದರ್ಶನ

‘ರಾಮಾಯಣ ಪಾರ್ಟ್ 1’ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐಮ್ಯಾಕ್ಸ್‌ (IMAX) ಸೇರಿದಂತೆ ಪ್ರೀಮಿಯಂ ಫಾರ್ಮ್ಯಾಟ್‌ಗಳಲ್ಲಿಯೂ ಸಿನಿಮಾ ತೆರೆಕಾಣಲಿದೆ. ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ಎರಡು ಭಾಗಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಭಾರತದ ಹೊರಗಿನ ಮಾರುಕಟ್ಟೆಗಳಲ್ಲಿ ಸೋನಿ ಪಿಕ್ಚರ್ಸ್ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಧರ್ಮಾ ಪ್ರೊಡಕ್ಷನ್ಸ್ ವಿತರಣೆ ನಿರ್ವಹಿಸಲಿದೆ.

2027ರ ದೀಪಾವಳಿಗೆ ಪಾರ್ಟ್ 2

ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸರಣಿಯ ಮೊದಲ ಭಾಗ 2026ರ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಎರಡನೇ ಭಾಗವನ್ನು 2027ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಪ್ರಕಟಿಸಲಾಗಿದೆ.

ಇದನ್ನೂ ಓದಿ: Bank Rules: ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ಖಾತೆಯಲ್ಲಿರುವ ಹಣ ಯಾರಿಗೆ ಸಿಗುತ್ತದೆ?

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಸೇರಿದಂತೆ ಪ್ರಮುಖ ತಾರಾಗಣ ಹೊಂದಿರುವ ಈ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಬಿಡುಗಡೆಗೆ ಮುನ್ನವೇ ಹೊಸ ಪೋಸ್ಟರ್ ಮತ್ತು ದಿನಾಂಕದ ಘೋಷಣೆ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Leave a Reply

Your email address will not be published. Required fields are marked *