‘ಟಾಕ್ಸಿಕ್’ ನೋಡಿ ಮೆಚ್ಚಿದ ಕಿಚ್ಚ ಸುದೀಪ್; ಯಶ್ ಪ್ರಯತ್ನಕ್ಕೆ ಭರ್ಜರಿ ಚಪ್ಪಾಳೆ

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಚಿತ್ರದ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಕೂಡ ‘ಟಾಕ್ಸಿಕ್’ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಗಸ್ಟ್ 26ರಂದು ಬಿಡುಗಡೆಯಾದ ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿದ ಸುದೀಪ್, ಯಶ್ ಅವರ ವಿಭಿನ್ನ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಯಶ್ ಅವರ ಹಿಂದಿನ ಹಿಟ್ ಸಿನಿಮಾಗಳ ಫಾರ್ಮುಲಾವನ್ನೇ ಮುಂದುವರಿಸಬಹುದಿತ್ತು. ಆದರೆ ಅದರ ಬದಲು ಹೊಸ ರೀತಿಯ ಸಿನಿಮಾ ಮಾಡಲು ಯಶ್ ಧೈರ್ಯ ತೋರಿಸಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.

“ಹಿಂದಿನ ಬ್ಲಾಕ್‌ಬಸ್ಟರ್ ಸಿನಿಮಾದ ಹಾದಿಯಲ್ಲೇ ಮತ್ತೊಂದು ಸಿನಿಮಾ ಮಾಡುವ ಬದಲು ಹೊಸ ಮತ್ತು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಇದಕ್ಕೆ ಬೇರೆಯದೇ ಮನಸ್ಥಿತಿ, ಆತ್ಮವಿಶ್ವಾಸ ಮತ್ತು ಮುಖ್ಯವಾಗಿ ಧೈರ್ಯ ಬೇಕು” ಎಂದು ಸುದೀಪ್ ಯಶ್ ಅವರನ್ನು ಹೊಗಳಿದ್ದಾರೆ.

‘ಟಾಕ್ಸಿಕ್’ ಒಂದು ಅಪರೂಪದ ಮತ್ತು ಶ್ಲಾಘನೀಯ ಪ್ರಯತ್ನ ಎಂದಿರುವ ಸುದೀಪ್, ಸಿನಿಮಾದ ಹಲವು ಅಂಶಗಳು ಕುತೂಹಲ ಮೂಡಿಸುತ್ತವೆ. ಅವುಗಳ ಬಗ್ಗೆ ಚರ್ಚೆ ಹಾಗೂ ಕಲಿಕೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.

ಸಾಂಪ್ರದಾಯಿಕ ಸಿನಿಮಾ ಶೈಲಿಯಿಂದ ಹೊರಬಂದು ಇಂತಹ ಪ್ರಯೋಗ ಮಾಡಿರುವ ಯಶ್ ಹಾಗೂ ಇಡೀ ತಂಡಕ್ಕೆ ಸುದೀಪ್ ಶುಭ ಹಾರೈಸಿದ್ದಾರೆ. ಸ್ನೇಹಿತ ಯಶ್‌ಗೆ ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ಕೂಡ ‘ಟಾಕ್ಸಿಕ್’ಗೆ ಫಿದಾ
ಸುದೀಪ್‌ಗೂ ಮುನ್ನ ನಟ ಉಪೇಂದ್ರ ಕೂಡ ‘ಟಾಕ್ಸಿಕ್’ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಸಿನಿಮಾ “ಒಂದು ಹೊಸ ಲೋಕ, ಸಂಪೂರ್ಣ ಹೊಸ ಅನುಭವ” ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರ ಶ್ರಮ, ಶ್ರದ್ಧೆ ಮತ್ತು ಕಲೆಯ ಮೇಲಿನ ಪ್ರೀತಿಯನ್ನು ಉಪೇಂದ್ರ ಶ್ಲಾಘಿಸಿದ್ದರು. ಯಶ್ ಸೇರಿದಂತೆ ಇಡೀ ತಂಡಕ್ಕೆ ಹ್ಯಾಟ್ಸ್ ಆಫ್ ಎಂದಿದ್ದರು.

ಆರ್. ಚಂದ್ರು ಕೂಡ ಯಶ್ ಬೆನ್ನಿಗೆ
ನಿರ್ದೇಶಕ ಆರ್. ಚಂದ್ರು ಕೂಡ ‘ಟಾಕ್ಸಿಕ್’ ತಂಡಕ್ಕೆ ಬೆಂಬಲ ನೀಡಿದ್ದಾರೆ. ‘ಇದು ಕೇವಲ ಸಿನಿಮಾ ಅಲ್ಲ, ಕನ್ನಡಿಗನೊಬ್ಬ ಜಗತ್ತನ್ನೇ ಗೆಲ್ಲುವ ಪ್ರಯತ್ನ’ ಎಂದು ಅವರು ಯಶ್ ಅವರ ಪ್ರಯತ್ನವನ್ನು ಹೊಗಳಿದ್ದಾರೆ.

ಒಟ್ಟಿನಲ್ಲಿ, ‘ಟಾಕ್ಸಿಕ್’ ಬಗ್ಗೆ ಪ್ರೇಕ್ಷಕರಲ್ಲಿ ಚರ್ಚೆ ಮುಂದುವರಿದಿರುವ ನಡುವೆಯೇ ಸುದೀಪ್, ಉಪೇಂದ್ರ ಹಾಗೂ ಆರ್. ಚಂದ್ರು ಅವರಂತಹ ಪ್ರಮುಖರು ಯಶ್ ಅವರ ಪ್ರಯತ್ನವನ್ನು ಮೆಚ್ಚಿಕೊಂಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಬಲ ನೀಡಿದೆ.

Leave a Reply

Your email address will not be published. Required fields are marked *