ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ದೇಶದಲ್ಲಿ 5,000 ಹೊಸ PG ಸೀಟು, 5,023 MBBS ಸೀಟು ಸೇರ್ಪಡೆ

ನವದೆಹಲಿ, ಆಗಸ್ಟ್ 9: ಮೆಡಿಕಲ್ ಓದಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೇಶದಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಜೊತೆಗೆ ವೈದ್ಯಕೀಯ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಸೀಟುಗಳನ್ನು ಸೇರ್ಪಡೆ ಮಾಡಲು ಸರ್ಕಾರ ನಿರ್ಧರಿಸಿದೆ.

2028-29ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ 5,000 ಹೆಚ್ಚುವರಿ ಮೆಡಿಕಲ್ PG ಸೀಟುಗಳನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಲೋಕಸಭೆಗೆ ನೀಡಿದ ಉತ್ತರದಲ್ಲಿ ಈ ಮಾಹಿತಿ ತಿಳಿಸಿದ್ದಾರೆ.

90 ಸಾವಿರ ದಾಟಲಿದೆ PG ಸೀಟುಗಳ ಸಂಖ್ಯೆ

ಸದ್ಯ ದೇಶದಲ್ಲಿ ಒಟ್ಟು 86,360 ಮೆಡಿಕಲ್ PG ಸೀಟುಗಳು ಲಭ್ಯವಿವೆ. ಇದರ ಜೊತೆಗೆ 5,000 ಹೊಸ ಸೀಟುಗಳು ಸೇರ್ಪಡೆಯಾದ ಬಳಿಕ ದೇಶದಲ್ಲಿ PG ಸೀಟುಗಳ ಸಂಖ್ಯೆ 90 ಸಾವಿರದ ಗಡಿ ದಾಟಲಿದೆ.

ಸರ್ಕಾರಿ ಮೆಡಿಕಲ್ ಕಾಲೇಜುಗಳು, PG ಸಂಸ್ಥೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಕೇಂದ್ರ ಪ್ರಾಯೋಜಿತ ಯೋಜನೆಯ ಮೂರನೇ ಹಂತದಡಿ ಈ ಹೊಸ ಸೀಟುಗಳನ್ನು ಸೃಷ್ಟಿಸಲಾಗುತ್ತಿದೆ.

ಹೊಸ ಸೀಟುಗಳ ನಿರ್ಮಾಣಕ್ಕೆ ನೀಡುವ ಆರ್ಥಿಕ ನೆರವನ್ನೂ ಸರ್ಕಾರ ಹೆಚ್ಚಿಸಿದೆ. ಪ್ರತಿ ಸೀಟಿಗೆ ಗರಿಷ್ಠ ₹1.50 ಕೋಟಿ ವೆಚ್ಚದ ಮಿತಿಯನ್ನು ನಿಗದಿಪಡಿಸಲಾಗಿದೆ.

ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ

ದೇಶದಲ್ಲಿರುವ ಒಟ್ಟು 86,360 PG ಸೀಟುಗಳ ಪೈಕಿ ಅತಿಹೆಚ್ಚು ಸೀಟುಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯದಲ್ಲಿ ಒಟ್ಟು 10,092 ಮೆಡಿಕಲ್ PG ಸೀಟುಗಳಿವೆ.

ಇದರಲ್ಲಿ 2,805 ಸರ್ಕಾರಿ ಸೀಟುಗಳು ಹಾಗೂ 7,287 ಖಾಸಗಿ ಸೀಟುಗಳು ಇವೆ.

ಅತಿಹೆಚ್ಚು PG ಸೀಟುಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 9,216 ಸೀಟುಗಳೊಂದಿಗೆ ಎರಡನೇ ಹಾಗೂ ತಮಿಳುನಾಡು 8,023 ಸೀಟುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

MBBS ಸೀಟುಗಳೂ ಹೆಚ್ಚಳ

PG ಸೀಟುಗಳ ಜೊತೆಗೆ ದೇಶದಲ್ಲಿ 5,023 ಹೊಸ MBBS ಸೀಟುಗಳನ್ನು ಕೂಡ ಹಂತ ಹಂತವಾಗಿ ಸೇರ್ಪಡೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಸದ್ಯ ದೇಶದ 823 ಮೆಡಿಕಲ್ ಕಾಲೇಜುಗಳಲ್ಲಿ ಒಟ್ಟು 1,36,939 MBBS ಸೀಟುಗಳಿವೆ. ಇದರಲ್ಲಿ 63,296 ಸರ್ಕಾರಿ ಸೀಟುಗಳಾಗಿವೆ.

MBBS ಸೀಟುಗಳ ಸಂಖ್ಯೆಯಲ್ಲೂ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಂತರ ಉತ್ತರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳು ಇವೆ.

ಹೊಸ PG ಮತ್ತು MBBS ಸೀಟುಗಳಿಂದ NEET-PG ಹಾಗೂ ಮೆಡಿಕಲ್ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚಾಗಲಿವೆ. ಜೊತೆಗೆ ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ನಗರಗಳಲ್ಲಿ ತಜ್ಞ ವೈದ್ಯರ ಲಭ್ಯತೆಯೂ ಹೆಚ್ಚಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *