ಬೆಂಗಳೂರು: ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಗ್ರಾಹಕರಿಗೆ e-KYC ಬಗ್ಗೆ ಮಹತ್ವದ ಸೂಚನೆ ನೀಡಲಾಗಿದೆ. ಆಗಸ್ಟ್ 15ರೊಳಗೆ LPG ಸಂಪರ್ಕದ e-KYC ಪೂರ್ಣಗೊಳಿಸಿಕೊಳ್ಳುವಂತೆ ಗ್ಯಾಸ್ ವಿತರಕರು ಗ್ರಾಹಕರಿಗೆ ಮನವಿ ಮಾಡಿದ್ದಾರೆ. e-KYC ಮಾಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಗ್ರಾಹಕರ ಮಾಹಿತಿಯನ್ನು ಪರಿಶೀಲಿಸುವುದು, ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ e-KYC ಪ್ರಕ್ರಿಯೆ ನಡೆಸಲಾಗುತ್ತಿದೆ. ಹೀಗಾಗಿ ನಿಮ್ಮ ಗ್ಯಾಸ್ ಸಂಪರ್ಕಕ್ಕೆ e-KYC ಆಗಿದೆಯೇ ಇಲ್ಲವೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
e-KYC ಮಾಡಿಸದಿದ್ರೆ ಏನಾಗುತ್ತೆ?
ದೀರ್ಘಕಾಲ KYC ಪೂರ್ಣಗೊಳಿಸದೇ ಇದ್ದರೆ ಗ್ಯಾಸ್ ಸಂಪರ್ಕವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಅಥವಾ ನಿಷ್ಕ್ರಿಯಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಬದಲು ವಾಣಿಜ್ಯ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗಬಹುದು ಎಂಬ ಮಾಹಿತಿಯೂ ಇದೆ.
ಬೆಂಗಳೂರಿನ ಗ್ಯಾಸ್ ವಿತರಕರ ಪ್ರಕಾರ, ಗೃಹ ಬಳಕೆಯ LPG ಸಿಲಿಂಡರ್ ಪಡೆಯಲು ಯಾವುದೇ ತೊಂದರೆ ಆಗದಂತೆ ಗ್ರಾಹಕರು ಮುಂಚಿತವಾಗಿಯೇ ತಮ್ಮ e-KYC ಸ್ಟೇಟಸ್ ಪರಿಶೀಲಿಸಿಕೊಳ್ಳಬೇಕು.
ಮನೆಯಲ್ಲೇ e-KYC ಮಾಡಬಹುದು
e-KYC ಮಾಡಲು ಪ್ರತಿಬಾರಿಯೂ ಗ್ಯಾಸ್ ಏಜೆನ್ಸಿಗೆ ಹೋಗಬೇಕಾದ ಅಗತ್ಯವಿಲ್ಲ. ನಿಮ್ಮ LPG ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್ ಮೂಲಕವೂ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶವಿದೆ.
ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಆ್ಯಪ್‌ಗೆ ಲಾಗಿನ್ ಮಾಡಿ, e-KYC ಅಥವಾ Aadhaar Verification ಆಯ್ಕೆಯನ್ನು ಹುಡುಕಬೇಕು. ನಂತರ ಮೊಬೈಲ್ ಕ್ಯಾಮೆರಾ ಮೂಲಕ ಮುಖ ದೃಢೀಕರಣ ಪೂರ್ಣಗೊಳಿಸಿ, ಅಗತ್ಯ ಮಾಹಿತಿಯನ್ನು ಸಲ್ಲಿಸಬಹುದು.
ಕೊನೆಯ ಕ್ಷಣದವರೆಗೆ ಕಾಯಬೇಡಿ
ಗ್ಯಾಸ್ ಸಂಪರ್ಕ ನಿಮ್ಮ ಹೆಸರಿನಲ್ಲಿದ್ದರೆ e-KYC ಪೂರ್ಣಗೊಂಡಿದೆಯೇ ಎಂಬುದನ್ನು ಈಗಲೇ ಪರಿಶೀಲಿಸಿಕೊಳ್ಳುವುದು ಉತ್ತಮ. ಯಾವುದೇ ಗೊಂದಲವಿದ್ದರೆ ಹತ್ತಿರದ ಅಧಿಕೃತ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ವಿಶೇಷವಾಗಿ ಬೆಂಗಳೂರಿನ ಗ್ರಾಹಕರು ಆಗಸ್ಟ್ 15ರ ಗಡುವಿನ ಬಗ್ಗೆ ಗಮನಹರಿಸುವಂತೆ ವಿತರಕರು ಮನವಿ ಮಾಡಿದ್ದಾರೆ.