ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಮದುವೆ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ವರದಿಗಳ ಪ್ರಕಾರ, ಇವರಿಬ್ಬರು ಇದೇ ವರ್ಷದ ಡಿಸೆಂಬರ್ 4ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಲಕ್ನೋದ ರಾಮದಾ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ ಎನ್ನಲಾಗಿದ್ದು, ಈಗಾಗಲೇ ಮದುವೆ ತಯಾರಿಗಳು ಶುರುವಾಗಿವೆ. ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು ಸೇರಿದಂತೆ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಜೂನ್‌ನಲ್ಲೇ ನಡೆದಿತ್ತು ಎಂಗೇಜ್‌ಮೆಂಟ್
ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ 2025ರ ಜೂನ್ 8ರಂದು ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಂಗೇಜ್‌ಮೆಂಟ್ ಬಳಿಕ 2025ರ ನವೆಂಬರ್‌ನಲ್ಲಿ ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿಯೂ ಹರಿದಾಡಿತ್ತು.
ಆದರೆ ರಿಂಕು ಸಿಂಗ್ ಅವರ ಕ್ರಿಕೆಟ್ ಬದ್ಧತೆಗಳಿಂದಾಗಿ ಮದುವೆ ಮುಂದೂಡಿಕೆಯಾಯಿತು ಎನ್ನಲಾಗಿದೆ. ನಂತರ ಫೆಬ್ರವರಿ 2026ರಲ್ಲಿ ಮದುವೆ ನಡೆಸಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಟಿ20 ವಿಶ್ವಕಪ್ ಸೇರಿದಂತೆ ಹಲವು ಕ್ರಿಕೆಟ್ ಪಂದ್ಯಗಳಿದ್ದ ಕಾರಣ ಮತ್ತೆ ಮದುವೆ ಮುಂದೂಡಲಾಯಿತು.
ಒಂದು ವರ್ಷದ ಬಳಿಕ ಮದುವೆ
ಇದೀಗ ಸುಮಾರು ಒಂದು ವರ್ಷದ ಬಳಿಕ ರಿಂಕು ಮತ್ತು ಪ್ರಿಯಾ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಮುನ್ನವೇ ಮದುವೆ ದಿನಾಂಕ ಫಿಕ್ಸ್ ಆಗಿರುವುದು ಕೂಡ ಗಮನ ಸೆಳೆದಿದೆ.
ಆದ್ರೆ ಪ್ರಿಯಾ ಸರೋಜ್ ಅವರಿಗೆ ಮದುವೆಯನ್ನು ತಮ್ಮ ಸ್ವಗ್ರಾಮದಲ್ಲೇ ಸಾಂಪ್ರದಾಯಿಕ ರೀತಿಯಲ್ಲಿ ಮಾಡಿಕೊಳ್ಳುವ ಆಸೆ ಇತ್ತಂತೆ.
ಬಾಲ್ಯದಿಂದಲೂ ಹಳ್ಳಿಯ ಸಾಂಪ್ರದಾಯಿಕ ಮದುವೆಗಳನ್ನು ನೋಡಿಕೊಂಡು ಬೆಳೆದಿರುವ ಪ್ರಿಯಾ ಅವರಿಗೆ, ಸಂಬಂಧಿಕರು, ಕುಟುಂಬಸ್ಥರು ಹಾಗೂ ಹಳ್ಳಿಯ ವಾತಾವರಣದಲ್ಲಿ ಮದುವೆಯಾಗಬೇಕು ಎಂಬ ಆಸೆ ಇತ್ತು ಎನ್ನಲಾಗಿದೆ.
ಆದರೆ ರಿಂಕು ಮತ್ತು ಪ್ರಿಯಾ ಇಬ್ಬರೂ ಈಗ ಸಾಕಷ್ಟು ಜನಪ್ರಿಯರಾಗಿರುವುದರಿಂದ ಹೆಚ್ಚಿನ ಜನರ ಗಮನ ಸೆಳೆಯುವ ಸಾಧ್ಯತೆ ಇದೆ. ಹೀಗಾಗಿ ಮದುವೆಯನ್ನು ಲಕ್ನೋದಲ್ಲೇ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಮದುವೆಯ ಡೇಟ್ ಫಿಕ್ಸ್ ಆಗಿದೆ ಎಂಬ ಸುದ್ದಿ ಇದೀಗ ಅವರ ಫ್ಯಾನ್ಸ್‌ನಲ್ಲಿ ಕುತೂಹಲ ಮೂಡಿಸಿದೆ.