ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನಟ ಶಿವರಾಜ್‌ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಶಿವಣ್ಣ, “ಇದು ನಮ್ಮ ಹುಡುಗನ ಸಿನಿಮಾ” ಎಂದು ಯಶ್ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಅದರಲ್ಲೂ ಸಿನಿಮಾದ ಕೊನೆಯ 20 ನಿಮಿಷಗಳು ಗೇಮ್ ಚೇಂಜಿಂಗ್ ಆಗಿವೆ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಯಶ್ ಅದ್ಭುತವಾಗಿ ಮಿಂಚಿದ್ದಾರೆ. ಅದರಲ್ಲೂ ಲಾಸ್ಟ್ 20 ನಿಮಿಷ ಅಂತೂ ಗೇಮ್ ಚೇಂಜಿಂಗ್. ಯಾರು ನೆಗೆಟಿವ್ ಮಾಡುತ್ತಾರೆ ಅನ್ನೋದನ್ನು ನೀವೇ ಹುಡುಕಬೇಕು ಎಂದು ಶಿವಣ್ಣ ಹೇಳಿದ್ದಾರೆ.
“ಯಶ್ ಸಿನಿಮಾ ಅಂದರೆ ನಮ್ಮ ಹುಡುಗನ ಸಿನಿಮಾ. ನನ್ನ ತಮ್ಮನನ್ನು ನೋಡಿದ ಹಾಗೆ ಯಶ್ ಅವರನ್ನು ನೋಡುತ್ತೇನೆ. ಯಶ್ ಅವರ ‘ರಾಯ’ ಮತ್ತು ‘ಟಿಕೆಟ್ 2’ ಗೆಟಪ್ ನನಗೆ ಇಷ್ಟ ಆಯ್ತು. ಕೊನೆಯಲ್ಲಿ ಸಕತ್ ಆಗಿ ಕಾಣಿಸಿದ್ದಾರೆ” ಎಂದು ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದೆ’
ಹೈದರಾಬಾದ್‌ನಲ್ಲಿ ಸಿನಿಮಾ ನೋಡಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ನಿನ್ನೆನೇ ಟಿಕೆಟ್ ಬುಕ್ ಮಾಡಿದ್ದೆ. ಇಂದು ಮನೆಯವರೆಲ್ಲ ಸೇರಿ ಸಿನಿಮಾ ನೋಡಿದ್ದೇವೆ ಎಂದು ಶಿವಣ್ಣ ಹೇಳಿದ್ದಾರೆ.
‘ಟಾಕ್ಸಿಕ್’ ಟ್ರೈಲರ್ ಅನ್ನು ತಾನೇ ಲಾಂಚ್ ಮಾಡಿದ್ದೆ. ಆಗ ನನ್ನನ್ನು ಟ್ರೋಲ್ ಮಾಡಿದ್ದರು. ಆದರೆ ಇಂದು ನಾನು ಶಿವರಾಜ್‌ಕುಮಾರ್ ಆಗಿ ಸಿನಿಮಾ ನೋಡಿಲ್ಲ. ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಸಿನಿಮಾ ನೋಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವತ್ತೂ ನಟರ ಪರವಾಗಿ ನಿಲ್ಲುತ್ತೇನೆ. ಮೊದಲಿನಿಂದಲೂ ಹಲವು ಹೀರೋಗಳ ಪರವಾಗಿ ಮಾತನಾಡಿದ್ದೇನೆ. ನನಗೆ ನಮ್ಮವರು ಮತ್ತು ಇಂಡಸ್ಟ್ರಿ ಮುಖ್ಯ. ಇದೀಗ ಯಶ್‌ಗಾಗಿ ಬಂದು ಸಿನಿಮಾ ನೋಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ.
‘ಕನ್ನಡ ಸಿನಿಮಾ ಬೆಳೆಯಬೇಕು’
ಪೈರಸಿ ಸಮಸ್ಯೆ ಮೊದಲಿನಿಂದಲೂ ಇದೆ. ಅದನ್ನು ಹೇಗೆ ತಡೆಯಬೇಕು ಎಂಬುದು ನಮಗೂ ಗೊತ್ತಾಗುತ್ತಿಲ್ಲ. ಆದರೆ ಸಿನಿಮಾ ಇಂಡಸ್ಟ್ರಿ ಬೆಳೆಯಬೇಕು, ನಮ್ಮ ಸಿನಿಮಾವಷ್ಟೇ ಅಲ್ಲ, ಕನ್ನಡ ಸಿನಿಮಾ ಬೆಳೆಯಬೇಕು ಎಂದು ಶಿವಣ್ಣ ಹೇಳಿದ್ದಾರೆ.
ನಮ್ಮವರು ಕೇವಲ ಸ್ಟಾರ್ ಸಿನಿಮಾಗಳನ್ನು ಮಾತ್ರ ನೋಡಬಾರದು. ಎಲ್ಲರ ಸಿನಿಮಾಗಳನ್ನೂ ನೋಡಬೇಕು. ಕನ್ನಡ ಸಿನಿಮಾ ಈಗ ಟಾಪ್‌ನಲ್ಲಿದೆ. ಯಾರೇ ಸ್ಟಾರ್ ಆಗಿದ್ದರೂ ಅವರು ಅಭಿಮಾನಿಗಳ ಸ್ಟಾರ್ ಅಷ್ಟೇ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.