ಪಾಟ್ನಾ: ನೇಪಾಳ ಮತ್ತು ನೆರೆಯ ಜಾರ್ಖಂಡ್ನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ವಾರಣಾಸಿಯಲ್ಲಿ ಗಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬಿಹಾರದಲ್ಲೂ ಪ್ರವಾಹದ ಆತಂಕ ಹೆಚ್ಚಾಗಿದೆ.
ಗಂಗಾ, ಗಂಡಕ, ಕೋಸಿ, ಬುರ್ಹಿ ಗಂಡಕ, ಬಾಗ್ಮತಿ, ಪುನಪುನ್ ಮತ್ತು ಘಘ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಟ್ನಾ, ವೈಶಾಲಿ, ಮುಝಫರ್ಪುರ, ಭಾಗಲ್ಪುರ, ಭೋಜ್ಪುರ, ಖಾಗರಿಯಾ, ಪೂರ್ಣಿಯಾ, ಮಾಧೇಪುರ, ಸಹರ್ಸಾ ಮತ್ತು ಕತಿಹಾರ್ ಜಿಲ್ಲೆಗಳ ಹಲವು ತಗ್ಗು ಪ್ರದೇಶಗಳು ಪ್ರವಾಹದ ಆತಂಕ ಎದುರಿಸುತ್ತಿವೆ.
ಧಾರಾಕಾರ ಮಳೆಯ ಬಳಿಕ ಗಂಗಾ ಮತ್ತು ಕೋಸಿ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುತ್ತಿದ್ದು, ಪಾಟ್ನಾ, ಭೋಜ್ಪುರ, ವೈಶಾಲಿ, ಲಖಿಸರಾಯ್ ಮತ್ತು ಭಾಗಲ್ಪುರದಲ್ಲೂ ಪ್ರವಾಹದ ಪರಿಸ್ಥಿತಿ ಕಂಡುಬಂದಿದೆ.
ನದಿ ಪಾತ್ರದಲ್ಲಿ ವಾಸಿಸುತ್ತಿದ್ದ ಕೆಲವರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಇದರ ನಡುವೆ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.