Lucia 2 : 13 ವರ್ಷಗಳ ಬಳಿಕ ‘ಲೂಸಿಯಾ 2’ಗೆ ಪ್ಲ್ಯಾನ್? ಮಹತ್ವದ ಸುಳಿವು ಕೊಟ್ಟ ನಿರ್ದೇಶಕ ಪವನ್ ಕುಮಾರ್

Lucia 2: ನೀನಾಸಂ  ಸತೀಶ್ ಮತ್ತು ಶ್ರುತಿ ಹರಿಹರನ್ ಅಭಿನಯದ ‘ಲೂಸಿಯಾ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಚಿತ್ರ. ಕ್ರೌಡ್ ಫಂಡಿಂಗ್ ಮೂಲಕ ಕಡಿಮೆ ಬಜೆಟ್‌ನಲ್ಲಿ ಪವನ್ ಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದ ಕಥೆ ಮಾತ್ರವಲ್ಲ, ಸಂಗೀತ ಕೂಡ ಇಂದಿಗೂ ಪ್ರೇಕ್ಷಕರಿಗೆ ಇಷ್ಟವಾಗಿದೆ.

2013ರ ಸೆಪ್ಟೆಂಬರ್ 6ರಂದು ಬಿಡುಗಡೆಯಾದ ‘ಲೂಸಿಯಾ’ಗೆ ಇದೀಗ 13 ವರ್ಷ. ಈ ಸಂದರ್ಭದಲ್ಲಿ ಚಿತ್ರದ ಎರಡನೇ ಭಾಗದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಹಲವು ವರ್ಷಗಳಿಂದ ಅಭಿಮಾನಿಗಳು ‘ಲೂಸಿಯಾ 2’ ಬೇಕು ಎಂದು ನಿರ್ದೇಶಕ ಪವನ್ ಕುಮಾರ್ ಬಳಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ.

ಇಷ್ಟು ವರ್ಷ ಈ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಹೇಳಿರುವ ಪವನ್ ಕುಮಾರ್, ಇದೀಗ ‘ಲೂಸಿಯಾ’ ಸೀಕ್ವೆಲ್ ಯಾಕೆ ಮಾಡಬಾರದು? ಎಂಬ ಆಲೋಚನೆ ಬಂದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪವನ್ ಕುಮಾರ್ ಸಿನಿಮಾ ನಿರ್ದೇಶನದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಮಲಯಾಳಂನ ‘ಧೂಮಂ’ ಅವರ ನಿರ್ದೇಶನದ ಕೊನೆಯ ಸಿನಿಮಾವಾಗಿದೆ. ಇದೀಗ ‘ಲೂಸಿಯಾ’ 13ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ನೀಡಿರುವ ಈ ಸುಳಿವು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಹೀಗಾಗಿ ‘ಲೂಸಿಯಾ 2’ ನಿಜವಾಗಿಯೂ ಬರಲಿದೆಯೇ? ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಪವನ್ ಕುಮಾರ್ ಅವರೇ ಸ್ಪಷ್ಟ ಉತ್ತರ ನೀಡಬೇಕಿದೆ. ಸದ್ಯಕ್ಕೆ ಇದು ಅಧಿಕೃತ ಘೋಷಣೆಯಾಗಿಲ್ಲ, ಆದರೆ ನಿರ್ದೇಶಕರ ಮಾತು ಸೀಕ್ವೆಲ್ ನಿರೀಕ್ಷೆಗೆ ಮತ್ತಷ್ಟು ಬಲ ನೀಡಿದೆ.

Leave a Reply

Your email address will not be published. Required fields are marked *