ಬೆಂಗಳೂರು: ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ವಿಜಯಲಕ್ಷ್ಮಿ ಮತ್ತು ಅವರ ತಂಡದವರು ಮನೆಗೆ ಬಂದು ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧನ್ವೀರ್ ತಂದೆ ತಿಮ್ಮೇಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೂರಿನಲ್ಲಿ ಏನಿದೆ?
ತಿಮ್ಮೇಗೌಡ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 21ರ ರಾತ್ರಿ ಸುಮಾರು 8:30ರ ವೇಳೆಗೆ ಧನ್ವೀರ್ ಮೈಸೂರಿಗೆ ತೆರಳಿದ್ದರು. ಆ ಸಮಯದಲ್ಲಿ ಮನೆಯಲ್ಲಿ ತಿಮ್ಮೇಗೌಡ, ಅವರ ಪತ್ನಿ ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಇದ್ದರು ಎನ್ನಲಾಗಿದೆ.
ಈ ವೇಳೆ ವಿಜಯಲಕ್ಷ್ಮಿ ಮತ್ತು ಅವರ ಮ್ಯಾನೇಜರ್ ನಾಗರಾಜ್ ಮನೆಗೆ ಬಂದು ಕಾಲಿಂಗ್ ಬೆಲ್ ಬಾರಿಸಿದ್ದಾರೆ. ಬಾಗಿಲು ತೆರೆದಾಗ, “ಧನ್ವೀರ್ ಎಲ್ಲಿ? ಅವರ ತಂದೆ ಎಲ್ಲಿದ್ದಾರೆ?” ಎಂದು ಕೇಳಿದ್ದಾರೆ. ಅದಕ್ಕೆ ಧನ್ವೀರ್ ಊರಲ್ಲಿಲ್ಲ, ಅವರ ತಂದೆ ಊಟ ಮಾಡುತ್ತಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಬಂಧಿಯನ್ನು ರೌಡಿ ಎಂದು ಭಾವಿಸಿ ಗಲಾಟೆ?
ಮನೆಯಲ್ಲಿದ್ದ ಸಂಬಂಧಿ ಅಜಯ್ ಗೌಡ ಅವರನ್ನು ಕಂಡ ಮ್ಯಾನೇಜರ್ ನಾಗರಾಜ್, “ನೀವು ರೌಡಿಗಳನ್ನು ಕರೆಸಿದ್ದೀರಾ? ನಾನು ಈಗ ರೌಡಿಗಳನ್ನು ಹೇಗೆ ಕರೆಸುತ್ತೇನೆ ನೋಡಿ” ಎಂದು ಕೂಗಾಡಿದ್ದಾರೆ ಎಂದು ತಿಮ್ಮೇಗೌಡ ಆರೋಪಿಸಿದ್ದಾರೆ.
ಬಳಿಕ ವಿಜಯಲಕ್ಷ್ಮಿ ಅವರು ಗೌರವ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿ “ಬೋಜಣ್ಣ ಮತ್ತು ಬಾಟಲಿ ಪ್ರಮೋದ್‌ನನ್ನು ಕಳಿಸು” ಎಂದು ಹೇಳಿದ್ದಾರೆ ಎನ್ನಲಾಗಿದೆ. ನಾಗರಾಜ್ ಕೂಡ ಫೋನ್ ಮಾಡಿ ಅವರನ್ನು ಬರಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಬೋಜ ಹಾಗೂ ಬಾಟಲಿ ಪ್ರಮೋದ್ ಮನೆಗೆ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಧನ್ವೀರ್‌ಗೆ ಬೆದರಿಕೆ ಹಾಕಿದ್ರಾ?
ಮನೆಗೆ ಬಂದ ವ್ಯಕ್ತಿಗಳು ಯಾರು ಎಂದು ಪ್ರಶ್ನಿಸಿದಾಗ, ಬಾಟಲಿ ಪ್ರಮೋದ್ ತಾನು ವಿಜಯಲಕ್ಷ್ಮಿ ಅವರ ತಮ್ಮ ಎಂದು ಹೇಳಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, “ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೋ ನಮಗೆ ಗೊತ್ತಿದೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಮ್ಮೇಗೌಡ ಆರೋಪಿಸಿದ್ದಾರೆ.
ಈ ವೇಳೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ ತಕ್ಷಣ ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡಿಕೊಂಡು ಸ್ಥಳದಿಂದ ಹೊರಟು ಹೋದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರಿಂದ NCR ದಾಖಲು
ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ತಿಮ್ಮೇಗೌಡ, ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಬೋಜ ಹಾಗೂ ಬಾಟಲಿ ಪ್ರಮೋದ್ ಅವರನ್ನು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ವಿಚಾರಣೆಯಿಂದ ತಿಳಿದುಬರಬೇಕಿದೆ. ಸದ್ಯಕ್ಕೆ ಇವು ದೂರುದಾರರು ಮಾಡಿರುವ ಆರೋಪಗಳಾಗಿದ್ದು, ಆರೋಪಿತ ವ್ಯಕ್ತಿಗಳ ಪ್ರತಿಕ್ರಿಯೆ ಅಥವಾ ಪೊಲೀಸ್ ತನಿಖೆಯ ಅಂತಿಮ ಫಲಿತಾಂಶದ ಬಗ್ಗೆ ಮಾಹಿತಿ ಲಭ್ಯವಿಲ್ಲ.