ಹಣ ಇದ್ದರೆ ಶ್ರೀಮಂತರು ಎಂದು ನಾವು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ದೊಡ್ಡ ಮನೆ, ದುಬಾರಿ ಕಾರು, ಬ್ಯಾಂಕ್‌ನಲ್ಲಿ ಸಾಕಷ್ಟು ಹಣ ಇದ್ದರೆ ಜೀವನ ಸೆಟಲ್ ಅಂತ ಭಾವಿಸುತ್ತೇವೆ. ಆದರೆ ಚಾಣಕ್ಯನ ವಿಚಾರದಲ್ಲಿ ಶ್ರೀಮಂತಿಕೆ ಅಂದ್ರೆ ಇದಕ್ಕಿಂತ ಸ್ವಲ್ಪ ವಿಭಿನ್ನ.
ಆರ್ಯ ಚಾಣಕ್ಯ ಮಹಾನ್ ಚಿಂತಕ, ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ತಜ್ಞರಾಗಿದ್ದರು. ಅವರ ‘ಚಾಣಕ್ಯ ನೀತಿ’ಯಲ್ಲಿರುವ ಹಲವು ವಿಚಾರಗಳು ಇಂದಿಗೂ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ.
ಚಾಣಕ್ಯನ ವಿಚಾರಗಳ ಪ್ರಕಾರ, ಕೈಯಲ್ಲಿ ಎಷ್ಟು ಹಣವಿದೆ ಎನ್ನುವುದಕ್ಕಿಂತ ಜೀವನದಲ್ಲಿ ಎಷ್ಟು ನೆಮ್ಮದಿ ಇದೆ ಎಂಬುದೇ ನಿಜವಾದ ಶ್ರೀಮಂತಿಕೆ. ಹಾಗಾದರೆ ಚಾಣಕ್ಯನ ಪ್ರಕಾರ ನಿಜವಾದ ಶ್ರೀಮಂತ ಯಾರು?
ಒಳ್ಳೆಯ ಮಕ್ಕಳು ಇದ್ದರೆ ಅದೇ ದೊಡ್ಡ ಸಂಪತ್ತು
ಚಾಣಕ್ಯನ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯ ಬಳಿ ಸಾಕಷ್ಟು ಹಣವಿದ್ದರೂ ಮಕ್ಕಳು ಒಳ್ಳೆಯವರಾಗಿಲ್ಲದಿದ್ದರೆ ಆ ಸಂಪತ್ತು ಸಂಪೂರ್ಣ ಸಂತೋಷ ನೀಡುವುದಿಲ್ಲ.
ಆದರೆ ಹಣ ಕಡಿಮೆಯಿದ್ದರೂ ಮಕ್ಕಳು ಒಳ್ಳೆಯ ಗುಣ, ಸಂಸ್ಕಾರ ಹೊಂದಿದ್ದರೆ ಅದೇ ದೊಡ್ಡ ಸಂಪತ್ತು. ಅಂಥ ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ಇರುತ್ತದೆ ಎಂಬುದು ಈ ವಿಚಾರದ ಸಾರ.
ಆರೋಗ್ಯವೇ ನಿಜವಾದ ಸಂಪತ್ತು
ಜೀವನದಲ್ಲಿ ಎಷ್ಟೇ ಹಣ ಸಂಪಾದಿಸಿದರೂ ಆರೋಗ್ಯ ಕೈಕೊಟ್ಟರೆ ಆ ಹಣವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಉತ್ತಮ ಆರೋಗ್ಯ ಹೊಂದಿರುವ ವ್ಯಕ್ತಿಯೇ ನಿಜವಾದ ಶ್ರೀಮಂತ ಎಂದು ಚಾಣಕ್ಯನ ವಿಚಾರಗಳು ಹೇಳುತ್ತವೆ. ಆರೋಗ್ಯ ಚೆನ್ನಾಗಿದ್ದರೆ ಸಾಮಾನ್ಯ ಜೀವನದಲ್ಲೂ ಸಂತೋಷ ಕಾಣಬಹುದು. ಆದರೆ ಹಣ ಇದ್ದರೂ ಆರೋಗ್ಯ ಇಲ್ಲದಿದ್ದರೆ ನೆಮ್ಮದಿ ಕಷ್ಟ.
ತೃಪ್ತಿ ಇದ್ದರೆ ಜೀವನವೇ ಶ್ರೀಮಂತ
ಇದು ಚಾಣಕ್ಯನ ವಿಚಾರಗಳಲ್ಲಿ ಪ್ರಮುಖವಾದದ್ದು. ಕೆಲವರಿಗೆ ಎಷ್ಟೇ ಹಣ ಬಂದರೂ ಇನ್ನಷ್ಟು ಬೇಕು. ಒಂದು ಸಿಕ್ಕರೆ ಮತ್ತೊಂದರ ಆಸೆ. ಹೀಗಾಗಿ ಹಣ ಹೆಚ್ಚಾದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ಇನ್ನೊಂದೆಡೆ, ಹೆಚ್ಚು ಹಣವಿಲ್ಲದಿದ್ದರೂ ಇರುವುದರಲ್ಲಿ ಸಂತೋಷಪಟ್ಟು ಜೀವನ ನಡೆಸುವವರು ನೆಮ್ಮದಿಯಾಗಿರುತ್ತಾರೆ.
ಹೀಗಾಗಿ ನಿಜವಾದ ಶ್ರೀಮಂತಿಕೆ ಹಣದ ಮೊತ್ತದಲ್ಲಿ ಅಲ್ಲ, ಮನಸ್ಸಿನ ತೃಪ್ತಿಯಲ್ಲಿ ಇದೆ ಎಂಬುದೇ ಚಾಣಕ್ಯನ ಈ ವಿಚಾರಗಳ ಸಾರ.
ಇಂದಿನ ದಿನಗಳಲ್ಲಿ ಹಣ ಸಂಪಾದಿಸುವ ಓಟದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿರುವವರಿಗೆ ಈ ಮಾತು ನಿಜಕ್ಕೂ ಯೋಚಿಸುವಂತೆ ಮಾಡುತ್ತದೆ. ಹಣ ಬೇಕು, ಆದರೆ ಅದರ ಜೊತೆಗೆ ಆರೋಗ್ಯ, ಒಳ್ಳೆಯ ಕುಟುಂಬ ಮತ್ತು ಮನಸ್ಸಿನ ನೆಮ್ಮದಿಯೂ ಇದ್ದಾಗಲೇ ಜೀವನ ಸಂಪೂರ್ಣವಾಗುತ್ತದೆ.