ನವದೆಹಲಿ: ಅಯೋಧ್ಯೆ ರಾಮಮಂದಿರದ ಪ್ರಸಾದ ಎಂದು ಸಾಮಾನ್ಯ ಸಿಹಿತಿಂಡಿಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ದಾರಿತಪ್ಪಿಸಿದ ಆರೋಪದಲ್ಲಿ Amazonಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಈ ಕ್ರಮ ಕೈಗೊಂಡಿದೆ.
ರಾಮಮಂದಿರ ಉದ್ಘಾಟನೆಗೂ ಮುನ್ನ, ಅಂದರೆ 2024ರ ಜನವರಿಯಲ್ಲಿ, Amazonನಲ್ಲಿ ಕೆಲವು ಸಿಹಿತಿಂಡಿಗಳನ್ನು ‘ರಾಮಮಂದಿರ ಪ್ರಸಾದ’ ಎಂಬ ಹೆಸರಿನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಈ ಬಗ್ಗೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಗ್ರಾಹಕ ಪ್ರಾಧಿಕಾರಕ್ಕೆ ದೂರು ನೀಡಿತ್ತು.
ದೂರು ಬಂದ ಬಳಿಕ CCPA, Amazonಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ನಂತರ ವಿವಾದಿತ ಸಿಹಿತಿಂಡಿಗಳ ಲಿಂಕ್ಗಳನ್ನು Amazon ತನ್ನ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಿತ್ತು.
ಟ್ರಸ್ಟ್ನಿಂದ ಅನುಮತಿ ಇರಲಿಲ್ಲ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ಇಂತಹ ಸಿಹಿತಿಂಡಿಗಳನ್ನು ಪ್ರಸಾದದ ಹೆಸರಿನಲ್ಲಿ ಮಾರಾಟ ಮಾಡಲು ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು CCPA ಹೇಳಿದೆ.
ಇದರಿಂದ ಗ್ರಾಹಕರು ಆ ಸಿಹಿತಿಂಡಿಗಳನ್ನು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾಗೆ ಅರ್ಪಿಸಿದ ಅಧಿಕೃತ ಪ್ರಸಾದ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ. ಹೀಗಾಗಿ ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿರುವುದು ಗಂಭೀರ ವಿಚಾರ ಎಂದು ಪ್ರಾಧಿಕಾರ ತಿಳಿಸಿದೆ.
CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ನೇತೃತ್ವದ ಸಮಿತಿ ವಿಚಾರಣೆ ನಡೆಸಿ Amazonಗೆ ₹1 ಲಕ್ಷ ದಂಡ ವಿಧಿಸಿದೆ.
Amazon ಹೇಳಿದ್ದೇನು?
ಈ ಪ್ರಕರಣದ ಬಗ್ಗೆ Amazon ತನ್ನ ಸ್ಪಷ್ಟನೆ ನೀಡಿದೆ. ತನ್ನ ಪ್ಲಾಟ್ಫಾರ್ಮ್ ಮುಕ್ತ ಮಾರುಕಟ್ಟೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಿವಾದಿತ ಸಿಹಿತಿಂಡಿಗಳನ್ನು Amazon ನೇರವಾಗಿ ಮಾರಾಟ ಮಾಡಿಲ್ಲ. ಮೂರನೇ ವ್ಯಕ್ತಿಯ ಮಾರಾಟಗಾರರು ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದರು ಎಂದು ಕಂಪನಿ ಹೇಳಿದೆ.
ಪ್ರಾಧಿಕಾರದಿಂದ ನೋಟಿಸ್ ಬಂದ ಬಳಿಕ ಸಂಬಂಧಿಸಿದ ಉತ್ಪನ್ನಗಳ ಲಿಂಕ್ಗಳನ್ನು ತೆಗೆದುಹಾಕಲಾಗಿದೆ. ನಿಯಮ ಉಲ್ಲಂಘಿಸಿದ ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡು, ಅವರ ಖಾತೆಗಳನ್ನು ಅಮಾನತುಗೊಳಿಸುವುದಾಗಿ Amazon ತಿಳಿಸಿದೆ.
ಮುಂದೆ ಇಂತಹ ಸೂಕ್ಷ್ಮ ಹಾಗೂ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ಲಾಟ್ಫಾರ್ಮ್ನಲ್ಲಿ ಲಿಸ್ಟ್ ಮಾಡುವ ಮುನ್ನ ಹೆಚ್ಚಿನ ಪರಿಶೀಲನೆ ನಡೆಸುವುದಾಗಿ ಕಂಪನಿ ಭರವಸೆ ನೀಡಿದೆ.