ರಕ್ತಸಂಬಂಧವಿಲ್ಲದಿದ್ರೂ ಪ್ರತಿ ವರ್ಷ ಈ ನಟನಿಗೆ ರಾಖಿ ಕಟ್ತಾರೆ ಐಶ್ವರ್ಯ ರೈ!

ಬಾಲಿವುಡ್‌ನಲ್ಲಿ ಕೆಲವು ಸಂಬಂಧಗಳು ರಕ್ತಸಂಬಂಧಕ್ಕಿಂತಲೂ ಹೆಚ್ಚು ವಿಶೇಷವಾಗಿರುತ್ತವೆ. ಅಂತಹ ಒಂದು ಬಾಂಧವ್ಯ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಸೋನು ಸೂದ್ ಅವರದ್ದು. ಇಬ್ಬರೂ ಸಿನಿಮಾದಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದು, ಆ ಸಂಬಂಧ ಇಂದಿಗೂ ಮುಂದುವರಿದಿದೆ.

2008ರಲ್ಲಿ ಬಿಡುಗಡೆಯಾದ ‘ಜೋಧಾ ಅಕ್ಬರ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಜೋಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋನು ಸೂದ್ ಅವರು ಜೋಧಾಳ ಸಹೋದರ ಸುಜಮಲ್ ಪಾತ್ರ ಮಾಡಿದ್ದರು. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು.

ಅದೇ ಸ್ನೇಹ ಮುಂದೆ ನಿಜ ಜೀವನದ ಅಣ್ಣ-ತಂಗಿ ಬಾಂಧವ್ಯವಾಗಿ ಬದಲಾಗಿದೆ. ಸೋನು ಸೂದ್ ಹೇಳಿರುವಂತೆ, ‘ಜೋಧಾ ಅಕ್ಬರ್’ ಚಿತ್ರೀಕರಣದ ಸಮಯದಲ್ಲೇ ಐಶ್ವರ್ಯಾ ಅವರಿಗೆ ಮೊದಲ ಬಾರಿ ರಾಖಿ ಕಟ್ಟಿದ್ದರು. ಆ ಬಳಿಕ ಪ್ರತಿ ವರ್ಷ ರಕ್ಷಾ ಬಂಧನದ ಸಂದರ್ಭದಲ್ಲಿ ಈ ವಿಶೇಷ ಸಂಪ್ರದಾಯ ಮುಂದುವರಿದಿದೆ ಎಂದು ಹೇಳಲಾಗುತ್ತದೆ.

ಚಿತ್ರೀಕರಣದ ಆರಂಭದಲ್ಲಿ ಐಶ್ವರ್ಯಾ ಸ್ವಲ್ಪ ಮೌನವಾಗಿದ್ದರು. ಆದರೆ ಒಂದು ಸಂದರ್ಭದಲ್ಲಿ ಅವರು ಸೋನು ಸೂದ್ ಅವರಿಗೆ, “ನೀವು ನನಗೆ ನನ್ನ ತಂದೆಯನ್ನು ನೆನಪಿಸುತ್ತೀರಿ” ಎಂದು ಹೇಳಿದ್ದರಂತೆ. ಈ ಮಾತಿನ ಬಳಿಕ ಇಬ್ಬರ ನಡುವಿನ ಆತ್ಮೀಯತೆ ಮತ್ತಷ್ಟು ಹೆಚ್ಚಾಯಿತು.

ಇಂದಿಗೂ ಐಶ್ವರ್ಯಾ ಅವರನ್ನು ಸೋನು ಸೂದ್ ‘ಭಾಯ್ ಸಾಹೇಬ್’ ಎಂದು ಕರೆಯುತ್ತಾರೆ. ರಕ್ತಸಂಬಂಧವಿಲ್ಲದಿದ್ದರೂ ಇಷ್ಟು ವರ್ಷಗಳಿಂದ ಈ ಅಣ್ಣ-ತಂಗಿಯ ಬಾಂಧವ್ಯ ಉಳಿಸಿಕೊಂಡಿರುವುದು ಅಭಿಮಾನಿಗಳಿಗೂ ವಿಶೇಷ ಎನಿಸಿದೆ.

ಸೋನು ಸೂದ್ ಅವರಿಗೆ ಬಚ್ಚನ್ ಕುಟುಂಬದೊಂದಿಗೂ ಉತ್ತಮ ಬಾಂಧವ್ಯವಿದೆ. ಅಮಿತಾಭ್ ಬಚ್ಚನ್ ಅವರೊಂದಿಗೆ ‘ಬುದ್ಧಾ ಹೋಗಾ ತೇರಾ ಬಾಪ್’ ಸಿನಿಮಾದಲ್ಲಿ, ಅಭಿಷೇಕ್ ಬಚ್ಚನ್ ಅವರೊಂದಿಗೆ ‘ಯುವ’ ಮತ್ತು ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

Leave a Reply

Your email address will not be published. Required fields are marked *