ಬೆಂಗಳೂರು: ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸಕ್ಕರೆ ಮತ್ತು ಬೆಲ್ಲದ ದರ ಮತ್ತೆ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆಜಿಗೆ ₹66 ಇದ್ದ ಸಕ್ಕರೆ, ಇದೀಗ ₹70ಕ್ಕೆ ಏರಿಕೆಯಾಗಿದೆ. ಅಂದರೆ ಕೆಜಿಗೆ ₹4 ಹೆಚ್ಚಳವಾಗಿದೆ.
ಇನ್ನು ಬೆಲ್ಲದ ದರದಲ್ಲಂತೂ ಏರಿಕೆ ಇನ್ನಷ್ಟು ಜೋರಾಗಿದೆ. ನಾಲ್ಕು ದಿನಗಳ ಹಿಂದೆ ಕೆಜಿಗೆ ₹68 ಇದ್ದ ಬೆಲ್ಲ, ಇದೀಗ ಬರೋಬ್ಬರಿ ₹80ಕ್ಕೆ ತಲುಪಿದೆ. ಕೇವಲ ಕೆಲವೇ ದಿನಗಳಲ್ಲಿ ಕೆಜಿಗೆ ₹12 ಏರಿಕೆಯಾಗಿರುವುದು ಗ್ರಾಹಕರಿಗೆ ಕಹಿ ಅನುಭವ ನೀಡಿದೆ.
ಸಕ್ಕರೆ ಮತ್ತು ಬೆಲ್ಲದ ದರ ಏರಿಕೆ ಕೇವಲ ಮನೆ ಬಜೆಟ್‌ಗೆ ಮಾತ್ರ ಪರಿಣಾಮ ಬೀರುವುದಿಲ್ಲ. ಸಿಹಿ ತಿನಿಸು ತಯಾರಕರು, ಟೀ-ಕಾಫಿ ಅಂಗಡಿಗಳು ಹಾಗೂ ಹೋಟೆಲ್ ಉದ್ಯಮದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಶೇಷವಾಗಿ ಬೆಂಗಳೂರಿನ ಹೋಟೆಲ್‌ಗಳು, ಬೇಕರಿಗಳು ಮತ್ತು ಸಿಹಿ ತಿಂಡಿ ಅಂಗಡಿಗಳಲ್ಲಿ ದಿನನಿತ್ಯ ಸಕ್ಕರೆ ಹಾಗೂ ಬೆಲ್ಲದ ಬಳಕೆ ಹೆಚ್ಚಿರುವುದರಿಂದ, ಬೆಲೆ ಏರಿಕೆಯ ಹೊರೆ ಕೊನೆಗೆ ಗ್ರಾಹಕರ ಮೇಲೂ ಬೀಳುವ ಸಾಧ್ಯತೆ ಇದೆ.
ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಸಿಹಿ ತಿಂಡಿಗಳ ಬೇಡಿಕೆ ಹೆಚ್ಚಾಗುವ ಸಮಯದಲ್ಲೇ ಈ ದರ ಏರಿಕೆ ನಡೆದಿರುವುದು ವ್ಯಾಪಾರಿಗಳಿಗೂ, ಗ್ರಾಹಕರಿಗೂ ಚಿಂತೆಯ ವಿಷಯವಾಗಿದೆ.