ಪತ್ನಿಯನ್ನು ಕೊಂದು ರುಂಡ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಸಾವು

ಗುವಾಹಟಿ: ಪತ್ನಿಯನ್ನು ಕೊಂದು, ಆಕೆಯ ತಲೆಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಆರೋಪಿಯೊಬ್ಬ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಘಟನೆ ಗುವಾಹಟಿಯ ಹತಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಾನುಜ್ ಗೋಸ್ವಾಮಿ (30) ಮೃತಪಟ್ಟ ಆರೋಪಿ. ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿಸಿ ರಾಮಾನುಜ್‌ನನ್ನು ಪೊಲೀಸರು ಹತಿಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು.

ನರಕಾಸುರ ಪಹಾರ್ ಪ್ರದೇಶದ ಬಳಿ ಪೊಲೀಸ್ ವಾಹನ ಚಲಿಸುತ್ತಿದ್ದ ವೇಳೆ ರಾಮಾನುಜ್ ಏಕಾಏಕಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ಯತ್ನಿಸಿ ವಾಹನದಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಲಿಸುತ್ತಿದ್ದ ವಾಹನದಿಂದ ಜಿಗಿದ ಆತ ಆಳವಾದ ಕಂದಕಕ್ಕೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಾನುಜನನ್ನು ಪೊಲೀಸರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪತ್ನಿಯ ಕೊಲೆ ಪ್ರಕರಣದಲ್ಲಿ ಬಂಧನ

ಸೆಪ್ಟೆಂಬರ್ 3ರಂದು ಗುವಾಹಟಿಯಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ 25 ವರ್ಷದ ಪತ್ನಿ ರಿಯಾ ತಾಲುಕ್ದಾರ್ ಅವರನ್ನು ರಾಮಾನುಜ್ ಹತ್ಯೆ ಮಾಡಿದ್ದ ಎನ್ನಲಾಗಿದೆ. ಪತ್ನಿಯ ನಡತೆಯ ಬಗ್ಗೆ ಅನುಮಾನ ಹೊಂದಿದ್ದ ರಾಮಾನುಜ್, ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಎನ್ನಲಾಗಿದೆ.

ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್‌ನಲ್ಲಿದ್ದ ಕಪ್ಪು ಪಾಲಿಥಿನ್ ಬ್ಯಾಗ್‌ನಲ್ಲಿ ರಿಯಾಳ ಕತ್ತರಿಸಿದ ತಲೆ ಹಾಗೂ ಬೆರಳುಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಾನುಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಹಾಗೂ ಸೆಕ್ಷನ್ 238 ಅಡಿಯಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪ ದಾಖಲಿಸಲಾಗಿತ್ತು. ಸೆಪ್ಟೆಂಬರ್ 6ರಂದು ಪೊಲೀಸರಿಗೆ ಶರಣಾಗಿದ್ದ ರಾಮಾನುಜ್‌ನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.

‘ಶುಗರ್ ಡ್ಯಾಡಿ’ ಕೊಲ್ಲುವುದಾಗಿ ಬೆದರಿಕೆ

ಸೆಪ್ಟೆಂಬರ್ 8ರಂದು ಪೊಲೀಸರು ರಾಮಾನುಜನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದರು. ಈ ವೇಳೆ ಹತ್ಯೆ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ಕ್ಷಮೆಯಾಚನೆ ಇಲ್ಲ ಎಂದು ಆತ ಹೇಳಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ತನ್ನ ಪತ್ನಿಯ ‘ಶುಗರ್ ಡ್ಯಾಡಿ’ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಜೈಲಿನಿಂದ ಬಿಡುಗಡೆಯಾದ ಬಳಿಕ ಕೊಲ್ಲುವುದಾಗಿ ರಾಮಾನುಜ್ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾದ ರಕ್ತದ ಕಲೆಗಳಿದ್ದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪರಾಧ ನಡೆದ ವೇಳೆ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ರಾಮಾನುಜ್ ಪೊಲೀಸರಿಗೆ ತಿಳಿಸಿದ್ದ. ಪರಿಶೀಲನೆ ವೇಳೆ ಫ್ಲ್ಯಾಟ್‌ನಲ್ಲಿ ಖಾಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬಸ್ಥರ ಆರೋಪದ ಬಗ್ಗೆಯೂ ತನಿಖೆ

ರಾಮಾನುಜನಿಗೆ ಮಾದಕ ವಸ್ತುಗಳ ವ್ಯಸನದ ಇತಿಹಾಸವಿತ್ತು ಹಾಗೂ ಕೆಲವು ವೈದ್ಯಕೀಯ ಸಮಸ್ಯೆಗಳನ್ನು ಆತ ಮರೆಮಾಚಿದ್ದ ಎಂದು ರಿಯಾ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೆ, 2019ರಲ್ಲಿ ಹಣಕಾಸು ವಂಚನೆ ಪ್ರಕರಣದಲ್ಲಿ ರಾಮಾನುಜ್ ಬಂಧನಕ್ಕೊಳಗಾಗಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *