ಮಕ್ಕಳನ್ನು ಓದಲು ಕೂರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೆಲವರು ಓದಲು ಆಸಕ್ತಿ ತೋರಿಸಿದರೆ, ಇನ್ನು ಕೆಲವರು ಪುಸ್ತಕ ತೆರೆದ ತಕ್ಷಣವೇ ಬೇಸರ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಬಲವಂತವಾಗಿ ಓದಲು ಕೂರಿಸುವ ಬದಲು, ಅವರಿಗೆ ಇಷ್ಟವಾಗುವ ರೀತಿಯಲ್ಲಿ ಕಲಿಕೆಯನ್ನು ಆರಂಭಿಸುವುದು ಮುಖ್ಯ. ಮಕ್ಕಳಲ್ಲಿ ಓದುವ ಆಸಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಪೋಷಕರು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
1. ಮಕ್ಕಳಿಗೆ ಇಷ್ಟವಾದ ವಿಷಯದಿಂದಲೇ ಓದು ಆರಂಭಿಸಿ
ಎಲ್ಲಾ ಮಕ್ಕಳಿಗೂ ಪ್ರತಿಯೊಂದು ವಿಷಯದ ಮೇಲೆ ಸಮಾನ ಆಸಕ್ತಿ ಇರುವುದಿಲ್ಲ. ಕೆಲವರಿಗೆ ಗಣಿತ ಇಷ್ಟವಾದರೆ, ಇನ್ನು ಕೆಲವರಿಗೆ ಇಂಗ್ಲಿಷ್ ಅಥವಾ ವಿಜ್ಞಾನ ಇಷ್ಟವಾಗಬಹುದು. ಹಾಗಾಗಿ ಓದಲು ಕೂರಿಸಿದ ತಕ್ಷಣ ಕಷ್ಟವಾದ ವಿಷಯವನ್ನು ನೀಡುವ ಬದಲು, ಅವರಿಗೆ ಇಷ್ಟವಾಗುವ ವಿಷಯದಿಂದಲೇ ಆರಂಭಿಸಿ.
ಉದಾಹರಣೆಗೆ, ಮಗುವಿಗೆ ಗಣಿತ ಇಷ್ಟವಿದ್ದರೆ ಕೆಲವು ಸರಳ ಲೆಕ್ಕಗಳನ್ನು ಬಿಡಿಸಲು ಹೇಳಬಹುದು. ಇಂಗ್ಲಿಷ್ ಇಷ್ಟವಿದ್ದರೆ ಕಥೆ ಓದಿಸುವುದು ಅಥವಾ ಹೊಸ ಪದಗಳನ್ನು ಕಲಿಸುವ ಮೂಲಕ ಓದನ್ನು ಆರಂಭಿಸಬಹುದು. ಹೀಗೆ ಸುಲಭವಾಗಿ ಅರ್ಥವಾಗುವ ವಿಷಯದಿಂದ ಶುರು ಮಾಡಿದರೆ ಮಕ್ಕಳಲ್ಲಿ ಓದುವ ಆಸಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಲು ಸಹಾಯವಾಗುತ್ತದೆ. ನಂತರ ನಿಧಾನವಾಗಿ ಬೇರೆ ವಿಷಯಗಳತ್ತ ಗಮನ ಹರಿಸಬಹುದು.
2. ಪ್ರತಿ 20 ನಿಮಿಷಕ್ಕೊಮ್ಮೆ 5 ನಿಮಿಷ ಬ್ರೇಕ್ ನೀಡಿ
ಮಕ್ಕಳು ಒಂದೇ ಕಡೆ ಹೆಚ್ಚು ಹೊತ್ತು ಕುಳಿತು ಓದಿದರೆ ದಣಿವು ಮತ್ತು ಬೇಸರ ಉಂಟಾಗಬಹುದು. ಇದರಿಂದ ಓದಿನ ಮೇಲಿನ ಗಮನವೂ ಕಡಿಮೆಯಾಗಬಹುದು. ಆದ್ದರಿಂದ ಸುಮಾರು 20 ನಿಮಿಷ ಓದಿದ ನಂತರ 5 ನಿಮಿಷಗಳ ಸಣ್ಣ ವಿರಾಮ ನೀಡಬಹುದು.
ಈ ಸಮಯದಲ್ಲಿ ಮಕ್ಕಳು ಸ್ವಲ್ಪ ನಡೆಯಬಹುದು, ನೀರು ಕುಡಿಯಬಹುದು ಅಥವಾ ದೇಹವನ್ನು ಹಿಗ್ಗಿಸಿಕೊಳ್ಳಬಹುದು. ಇದರಿಂದ ಮತ್ತೆ ಓದಲು ಕುಳಿತಾಗ ಹೊಸ ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗಬಹುದು. ಆದರೆ ಪ್ರತಿ ಮಗುವಿನ ವಯಸ್ಸು ಮತ್ತು ಏಕಾಗ್ರತೆ ವಿಭಿನ್ನವಾಗಿರುವುದರಿಂದ ವಿರಾಮದ ಸಮಯವನ್ನು ಅವರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದು.
3. ಓದಿನ ವಿಚಾರದಲ್ಲಿ ಮಕ್ಕಳ ಮೇಲೆ ಒತ್ತಡ ಹೇರಬೇಡಿ
ಮಕ್ಕಳು ಓದುತ್ತಿಲ್ಲ ಎಂದು ಪದೇ ಪದೇ ಬೈಯುವುದು, ಇತರ ಮಕ್ಕಳೊಂದಿಗೆ ಹೋಲಿಸುವುದು ಅಥವಾ ಅಂಕಗಳ ವಿಚಾರದಲ್ಲಿ ಬೆದರಿಸುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಮಕ್ಕಳಿಗೆ ಓದಿನ ಬಗ್ಗೆ ಮತ್ತಷ್ಟು ಭಯ ಅಥವಾ ಬೇಸರ ಉಂಟಾಗಬಹುದು.
ಬದಲಾಗಿ, ಅವರು ಮಾಡುವ ಸಣ್ಣ ಪ್ರಯತ್ನಗಳನ್ನೂ ಗುರುತಿಸಿ ಪ್ರೋತ್ಸಾಹಿಸಿ. ಪಾಠ ಅರ್ಥವಾಗದಿದ್ದರೆ ತಾಳ್ಮೆಯಿಂದ ವಿವರಿಸಿ. ಯಾವ ವಿಷಯ ಕಷ್ಟವಾಗುತ್ತಿದೆ, ಓದುವಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತಿದೆ ಎಂಬುದನ್ನು ಮಕ್ಕಳೊಂದಿಗೆ ಮಾತನಾಡಿ ತಿಳಿದುಕೊಳ್ಳಿ.
ಒಟ್ಟಿನಲ್ಲಿ, ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಮೂಡಿಸಲು ಪೋಷಕರ ಸಹಕಾರ ಬಹಳ ಮುಖ್ಯ. ಅವರಿಗೆ ಇಷ್ಟವಾಗುವ ವಿಷಯದಿಂದ ಓದು ಆರಂಭಿಸುವುದು, ನಡುವೆ ಸಣ್ಣ ವಿರಾಮ ನೀಡುವುದು ಮತ್ತು ಪ್ರೋತ್ಸಾಹಿಸುವುದು ಉತ್ತಮ ಅಭ್ಯಾಸಗಳಾಗಿವೆ. ಪ್ರತಿ ಮಗುವಿನ ಕಲಿಕೆಯ ವೇಗ ವಿಭಿನ್ನವಾಗಿರುವುದರಿಂದ ತಾಳ್ಮೆಯಿಂದ ಮಕ್ಕಳಿಗೆ ಸಹಾಯ ಮಾಡಬೇಕು.