6ನೇ ತರಗತಿ ವಿದ್ಯಾರ್ಥಿಗಳಿಗೂ ತ್ರಿಭಾಷಾ ನೀತಿಯಿಂದ ವಿನಾಯಿತಿ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ಸಿಬಿಎಸ್‌ಇ ತ್ರಿಭಾಷಾ ನೀತಿ ವಿಚಾರದಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್‌ ಮಹತ್ವದ ರಿಲೀಫ್ ನೀಡಿದೆ. 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ವಿನಾಯಿತಿಯನ್ನೇ 6ನೇ ತರಗತಿ ಮಕ್ಕಳಿಗೂ ನೀಡುವಂತೆ ಸಿಬಿಎಸ್‌ಇಗೆ ಕೋರ್ಟ್ ಸೂಚಿಸಿದೆ.

2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದಲೇ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ಬಂದಿದೆ. ಈ ವರ್ಷದಿಂದಲೇ 6ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ ಎಂದು ಕೋರ್ಟ್‌ಗೆ ತಿಳಿಸಿತ್ತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ 6ನೇ ತರಗತಿಗೂ ವಿನಾಯಿತಿ ವಿಸ್ತರಿಸಿದೆ.

ಮಕ್ಕಳಿಗೆ ಮಧ್ಯದಲ್ಲೇ ಭಾಷೆ ಬದಲಿಸುವ ಒತ್ತಡ!

ಈ ವಿಚಾರಣೆಯಲ್ಲಿ ವಿದ್ಯಾರ್ಥಿಗಳು ಈಗಾಗಲೇ ಒಂದು ಭಾಷಾ ವ್ಯವಸ್ಥೆಗೆ ಹೊಂದಿಕೊಂಡಿರುವಾಗ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊಸ ಭಾಷಾ ಚೌಕಟ್ಟು ತರುವ ಬಗ್ಗೆ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಪೋಷಕರ ಪರ ವಾದಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಹಲವು ವಿದ್ಯಾರ್ಥಿಗಳು 4ನೇ ತರಗತಿಯಿಂದಲೇ ನಿರ್ದಿಷ್ಟ ಭಾಷೆ ಮತ್ತು ವಿಷಯಗಳನ್ನು ಓದುತ್ತಿದ್ದಾರೆ. ಇದೀಗ ದಿಢೀರ್ ಆಗಿ ಭಾಷೆ ಬದಲಿಸುವಂತೆ ಹೇಳಿದರೆ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೋರ್ಟ್ ಗಮನಕ್ಕೆ ತಂದರು.

ಇದರ ಜೊತೆಗೆ, ಹೊಸ ಭಾಷಾ ವ್ಯವಸ್ಥೆಗೆ ಬೇಕಾದ ಪುಸ್ತಕಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಆನ್‌ಲೈನ್‌ನಲ್ಲಿ ಪುಸ್ತಕಗಳ ಲಭ್ಯತೆಯಲ್ಲೂ ಸಮಸ್ಯೆ ಇದೆ. ಕೆಲವು ವಿದ್ಯಾರ್ಥಿಗಳಿಗೆ ಭೌತಿಕ ಪಠ್ಯಪುಸ್ತಕಗಳು ಇನ್ನೂ ಸಿಕ್ಕಿಲ್ಲ ಎಂಬ ವಿಚಾರವನ್ನೂ ಕೋರ್ಟ್ ಮುಂದೆ ಪ್ರಸ್ತಾಪಿಸಲಾಗಿದೆ.

‘ವಿದ್ಯಾರ್ಥಿಗಳ ಶೈಕ್ಷಣಿಕ ನೆಮ್ಮದಿ ಮುಖ್ಯ’

ವಿಚಾರಣೆ ವೇಳೆ ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ, ವಿದ್ಯಾರ್ಥಿಗಳು ಹೊಸ ಭಾಷಾ ವ್ಯವಸ್ಥೆಯಿಂದ ಹೆಚ್ಚುವರಿ ಒತ್ತಡಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನೆಮ್ಮದಿ ಇರಬೇಕು. ಪ್ರತಿಯೊಂದು ಹಂತದಲ್ಲೂ ಅವರಿಗೆ ಹೊಸ ಸವಾಲುಗಳನ್ನು ನೀಡುವುದು ಉದ್ದೇಶವಾಗಬಾರದು ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅರ್ಜಿದಾರ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಸಮಿತಿ ರಚಿಸುವ ಸಲಹೆಯನ್ನೂ ನೀಡಿದ್ದಾರೆ. ಆದರೆ ಪೋಷಕರ ಪರ ವಕೀಲರು ಮತ್ತೊಂದು ಸಮಿತಿ ರಚಿಸುವ ಬದಲು ನೇರವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಅಸಲಿಗೆ ಏನಿದು ತ್ರಿಭಾಷಾ ನೀತಿ?

ಸಿಬಿಎಸ್‌ಇಯ ಹೊಸ ಭಾಷಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಇದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿರಬೇಕು.

ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಲಿ, ಪಂಜಾಬಿ, ಗುಜರಾತಿ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಗ್ಲಿಷ್, ಫ್ರೆಂಚ್, ಜರ್ಮನ್, ಅರೇಬಿಕ್, ಸ್ಪ್ಯಾನಿಷ್ ಸೇರಿದಂತೆ ವಿದೇಶಿ ಭಾಷೆಗಳ ಆಯ್ಕೆಯೂ ಇದೆ.

ಈ ವ್ಯವಸ್ಥೆಯಲ್ಲಿ R1, R2 ಮತ್ತು R3 ಎಂಬ ಮೂರು ಹಂತಗಳಿವೆ. R1 ವಿದ್ಯಾರ್ಥಿಯ ಮೊದಲ ಭಾಷೆಯಾಗಿದ್ದರೆ, R2 ಮತ್ತೊಂದು ವಿಭಿನ್ನ ಭಾಷೆಯಾಗಿರುತ್ತದೆ. R3 ಮೂರನೇ ಭಾಷೆಯಾಗಿದ್ದು, ಹೊಸ ನಿಯಮದ ಪ್ರಕಾರ 6ನೇ ತರಗತಿಯಿಂದ ಇದನ್ನು ಕಡ್ಡಾಯಗೊಳಿಸುವ ಯೋಜನೆ ಇತ್ತು.

9ನೇ ಮತ್ತು 10ನೇ ತರಗತಿಗೆ ಏನು?

9ನೇ ತರಗತಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಅವುಗಳಲ್ಲಿ ಕನಿಷ್ಠ ಒಂದು ಭಾರತೀಯ ಭಾಷೆಯಾಗಿರಬೇಕು. ಮೂರನೇ ಭಾಷೆಯನ್ನು ಶಾಲಾ ಮಟ್ಟದ ಆಂತರಿಕ ಮೌಲ್ಯಮಾಪನದ ಮೂಲಕ ಪರೀಕ್ಷಿಸಲಾಗುತ್ತದೆ.

2027-28ನೇ ಶೈಕ್ಷಣಿಕ ವರ್ಷದಲ್ಲಿ ಈ ವಿದ್ಯಾರ್ಥಿಗಳು 10ನೇ ತರಗತಿಗೆ ಹೋದಾಗ ಮೂರನೇ ಭಾಷೆಗೆ ಪ್ರತ್ಯೇಕ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ.

ಇನ್ನು 10ನೇ ತರಗತಿಯ ಪ್ರಸ್ತುತ ಬ್ಯಾಚ್‌ಗೆ ಹಳೆಯ ಎರಡು ಭಾಷೆಗಳ ವ್ಯವಸ್ಥೆಯೇ ಮುಂದುವರಿಯಲಿದೆ. ಈ ವರ್ಷದ 10ನೇ ತರಗತಿ ವಿದ್ಯಾರ್ಥಿಗಳು ಮೂರನೇ ಭಾಷೆ ತೆಗೆದುಕೊಳ್ಳುವ ಅಗತ್ಯವಿಲ್ಲ.

ವಿಚಾರಣೆ ಇನ್ನೂ ಮುಂದುವರಿಯಲಿದೆ

6ನೇ ತರಗತಿಗೂ ವಿನಾಯಿತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ, ತ್ರಿಭಾಷಾ ನೀತಿಯ ಸಂಪೂರ್ಣ ಕಡ್ಡಾಯತೆ ಕುರಿತ ಮುಖ್ಯ ವಿಚಾರ ಇನ್ನೂ ಅಂತಿಮವಾಗಿಲ್ಲ.

ಈ ಪ್ರಕರಣದ ವಿಚಾರಣೆಯನ್ನು 6 ವಾರಗಳ ನಂತರ ಮುಂದೂಡಲಾಗಿದೆ. 4 ವಾರಗಳಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಲು ಹಾಗೂ ನಂತರದ 2 ವಾರಗಳಲ್ಲಿ ಮರುಪ್ರತ್ಯುತ್ತರ ಸಲ್ಲಿಸಲು ಕೋರ್ಟ್ ನಿರ್ದೇಶನ ನೀಡಿದೆ.

Leave a Reply

Your email address will not be published. Required fields are marked *