ಬೆಂಗಳೂರಿಗೆ ಬರೋ ಮುನ್ನ ಯೋಚಿಸಿ! ಬದುಕೋದು ಕಷ್ಟ ಎಂದ ಮಹಿಳೆ – ವಿಡಿಯೋ ವೈರಲ್‌

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಬೇಕು ಅನ್ನೋದು ಅನೇಕರ ಕನಸು. ಆದರೆ ಇಲ್ಲಿ ಸಿಗುವ ಸಂಬಳಕ್ಕಿಂತ ಮನೆ ಬಾಡಿಗೆ, ದಿನಸಿ ಖರ್ಚು, ಸಾರಿಗೆ ವೆಚ್ಚ ಸೇರಿದಂತೆ ಜೀವನ ನಿರ್ವಹಣೆಯ ಖರ್ಚುಗಳೇ ಕೆಲವರಿಗೆ ದೊಡ್ಡ ಸವಾಲಾಗಿವೆ. ಇದೇ ವಿಚಾರವಾಗಿ ಮಹಿಳೆಯೊಬ್ಬರು ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯವಿದ್ದರೆ ಮಾತ್ರ ಬೆಂಗಳೂರಿಗೆ ಬರುವ ಬಗ್ಗೆ ಯೋಚಿಸಿ ಎಂದು ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬದುಕಲು ₹1 ಲಕ್ಷ ಸಂಬಳ ಬೇಕಾ?

ಅತ್ರೇಯಿ (Atreyee) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರಿಗೆ ಉದ್ಯೋಗಕ್ಕಾಗಿ ಬರಲು ಬಯಸುವವರು ತಮ್ಮ ಆದಾಯ ಮತ್ತು ಜೀವನ ನಿರ್ವಹಣೆಯ ಖರ್ಚುಗಳನ್ನು ಲೆಕ್ಕ ಹಾಕಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಹಿಳೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಹೀಗಾಗಿ ಕಡಿಮೆ ಸಂಬಳದಲ್ಲಿ ಮನೆ ಬಾಡಿಗೆ, ದಿನನಿತ್ಯದ ಖರ್ಚು ಮತ್ತು ಇತರ ಅಗತ್ಯಗಳನ್ನು ನಿಭಾಯಿಸುವುದು ಕಷ್ಟವಾಗಬಹುದು ಎಂಬುದು ಅವರ ಅಭಿಪ್ರಾಯ. ಈ ಕಾರಣದಿಂದಲೇ ಬೆಂಗಳೂರಿಗೆ ಬರುವ ಮುನ್ನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮನೆ ಖರೀದಿಸಲು ಕೋಟ್ಯಂತರ ರೂಪಾಯಿ ಬೇಕು!

ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದು ಸುಲಭದ ಮಾತಲ್ಲ ಎಂಬುದನ್ನೂ ಮಹಿಳೆ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಉತ್ತಮ ಸಾರಿಗೆ ಸಂಪರ್ಕ ಮತ್ತು ಅಗತ್ಯ ಸೌಲಭ್ಯಗಳಿರುವ ಪ್ರದೇಶಗಳಲ್ಲಿ ಮನೆ ಖರೀದಿಸಲು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮನೆಗಳ ಬೆಲೆ ಸುಮಾರು ₹2 ಕೋಟಿಯಷ್ಟಿರಬಹುದು. ಗೇಟೆಡ್ ಕಮ್ಯುನಿಟಿಗಳಲ್ಲಿ ಸೌಲಭ್ಯಗಳಿರುವ ಮನೆ ಖರೀದಿಸಲು ₹4 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೈಕ್ ಪ್ರಿಯರಿಗೆ ಗುಡ್ ನ್ಯೂಸ್.. ₹4,999 ಕೊಟ್ಟು ಬುಕ್ ಮಾಡಿ ಹೊಸ ಬೈಕ್!

2BHK ಮನೆ ಬಾಡಿಗೆ ₹40,000ರಿಂದ ₹45,000!

ಬೆಂಗಳೂರಿನ ಗೇಟೆಡ್ ಕಮ್ಯುನಿಟಿಗಳಲ್ಲಿ ಎರಡು ಬೆಡ್‌ರೂಮ್, ಹಾಲ್ ಮತ್ತು ಕಿಚನ್ ಹೊಂದಿರುವ 2BHK ಅಪಾರ್ಟ್‌ಮೆಂಟ್‌ಗೆ ತಿಂಗಳಿಗೆ ₹40,000ರಿಂದ ₹45,000ರವರೆಗೆ ಬಾಡಿಗೆ ನೀಡಬೇಕಾಗಬಹುದು ಎಂದು ಮಹಿಳೆ ಹೇಳಿದ್ದಾರೆ. ಸ್ವಂತ ಮನೆ ಖರೀದಿಸುವ ಗುರಿ ಹೊಂದಿರುವವರು ಹೆಚ್ಚಿನ ಆದಾಯ ಹೊಂದಿರಬೇಕಾಗುತ್ತದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಆದರೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಮತ್ತು ಆಸ್ತಿ ಬೆಲೆಗಳು ಪ್ರದೇಶ, ಮನೆಗಳ ಗಾತ್ರ ಹಾಗೂ ಸೌಲಭ್ಯಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಆದ್ದರಿಂದ ಈ ಮೊತ್ತಗಳು ನಗರದ ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದಿಲ್ಲ.

‘ದುಡಿದು ತಿನ್ನೋದೇ ಕಷ್ಟ, ಮನೆ ಖರೀದಿ ದೂರದ ಮಾತು!’

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಬೆಂಗಳೂರಿನ ದುಬಾರಿ ಜೀವನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದುಡಿದು ತಿನ್ನೋದೇ ಕಷ್ಟ, ಇನ್ನು ಮನೆ ಖರೀದಿ ದೂರದ ಮಾತು’ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಣವಿದ್ದರೆ ಮಾತ್ರ ಎಲ್ಲವೂ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮಹಿಳೆ ಹೇಳಿದ ಮೊತ್ತಕ್ಕಿಂತಲೂ ಹೆಚ್ಚಿನ ಬಾಡಿಗೆಯನ್ನು ತಾವು ನೀಡುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:  ಬಾಲಿವುಡ್ ಹಾಡಿನ ಮೂಲಕ ಮತಬೇಟೆ.. ಕೆನಡಾ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆ ಹವಾ!

ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜೀವನ ನಿರ್ವಹಣೆಯ ವೆಚ್ಚದ ಬಗ್ಗೆ ಈ ವಿಡಿಯೋ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಉದ್ಯೋಗಕ್ಕಾಗಿ ನಗರಕ್ಕೆ ಬರುವವರು ಸಂಬಳವಷ್ಟೇ ಅಲ್ಲದೆ ಮನೆ ಬಾಡಿಗೆ, ಆಹಾರ, ಸಾರಿಗೆ ಮತ್ತು ಇತರ ಖರ್ಚುಗಳನ್ನೂ ಲೆಕ್ಕ ಹಾಕಿಕೊಂಡು ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗಿದೆ.

Leave a Reply

Your email address will not be published. Required fields are marked *