27ನೇ ವಯಸ್ಸಿಗೆ ನಟಿ ಅನನ್ಯಾ ರಾಜ್ ನಿಧನ; ಒಂದು ತಿಂಗಳ ಬಳಿಕ ಹೊರಬಂತು ಸಾವಿನ ಸುದ್ದಿ

ಟಾಲಿವುಡ್‌ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅನನ್ಯಾ ರಾಜ್ (Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜುಲೈ 15ರಂದು ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದ ಅನನ್ಯಾ ಅವರ ಸಾವಿನ ಸುದ್ದಿಯನ್ನು ಕುಟುಂಬ ಇದೀಗ ಅಧಿಕೃತವಾಗಿ ಬಹಿರಂಗಪಡಿಸಿದೆ.

‘7 Hours to Go’, ‘The Final Exit’ ಮತ್ತು ‘Ghost’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಅನನ್ಯಾ, ಬಳಿಕ ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಸುದ್ದಿ ಇದೀಗ ಸಿನಿಮಾ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಅನನ್ಯಾ ಅವರ ಕುಟುಂಬವೇ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದೆ. ಜುಲೈ 15ರ ಮುಂಜಾನೆ ಅನನ್ಯಾ ನಿದ್ರೆಯಲ್ಲೇ ಶಾಂತಿಯುತವಾಗಿ ನಿಧನರಾದರು ಎಂದು ಕುಟುಂಬ ತಿಳಿಸಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಕುಟುಂಬ ಹೇಳಿದೆ. ಸಾವಿನ ಬಗ್ಗೆ ಇದಕ್ಕಿಂತ ಹೆಚ್ಚಿನ ವಿವರಗಳನ್ನು ಕುಟುಂಬ ಬಹಿರಂಗಪಡಿಸಿಲ್ಲ.

ಸಿನಿಮಾ ಜರ್ನಿ 
ಅನನ್ಯಾ ರಾಜ್ 2016ರಲ್ಲಿ ಬಿಡುಗಡೆಯಾದ ‘7 Hours to Go’ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟರು. ನಂತರ 2017ರಲ್ಲಿ ‘The Final Exit’ ಹಾಗೂ 2019ರಲ್ಲಿ ‘Ghost’ ಸಿನಿಮಾಗಳಲ್ಲಿ ನಟಿಸಿದರು. ಈ ಚಿತ್ರಗಳ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದರು.

ಬಳಿಕ ದಕ್ಷಿಣ ಭಾರತದ ಸಿನಿಮಾಗಳತ್ತಲೂ ಹೆಜ್ಜೆ ಇಟ್ಟ ಅನನ್ಯಾ, ‘Thaggede Le’ ಸಿನಿಮಾದಲ್ಲಿ ನವೀನ್ ಚಂದ್ರ ಸೇರಿದಂತೆ ಪ್ರಮುಖ ಕಲಾವಿದರ ಜೊತೆ ನಟಿಸಿದ್ದರು. 2022ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಬಗ್ಗೆ ಅವರು ಮಾತನಾಡಿದ್ದರು.

ಕೇವಲ 27ನೇ ವಯಸ್ಸಿನಲ್ಲೇ ಅನನ್ಯಾ ಅವರ ಬದುಕು ಹೀಗೆ ಅಂತ್ಯವಾಗಿರುವುದು ಅಭಿಮಾನಿಗಳು ಹಾಗೂ ಚಿತ್ರರಂಗದವರಲ್ಲಿ ಬೇಸರ ಮೂಡಿಸಿದೆ. ಅವರ ಕುಟುಂಬದ ನೋವಿನ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

Leave a Reply

Your email address will not be published. Required fields are marked *