ಸಮಂತಾ-ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನನ; ಮುದ್ದಾದ ಫೋಟೋ ಹಂಚಿಕೊಂಡ ನಟಿ!

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ದೇಶಕ-ನಿರ್ಮಾಪಕ ರಾಜ್ ನಿಡಿಮೋರು ದಂಪತಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಸಮಂತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಿಹಿ ಸುದ್ದಿಯನ್ನು ನವೆಂಬರ್ 20ರಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಮುದ್ದಿನ ಮಗುವಿನ ಆಗಮನವನ್ನು ವಿಶೇಷ ಫೋಟೋ ಮೂಲಕ ಘೋಷಿಸಿರುವ ಸಮಂತಾ, ಮಗುವಿನ ಪುಟ್ಟ ಬೆರಳುಗಳನ್ನು ತಾವು ಮತ್ತು ರಾಜ್ ಪ್ರೀತಿಯಿಂದ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಗುವಿಗೆ ‘ದೇವ’ ಎಂದು ಹೆಸರಿಟ್ಟ ಸಮಂತಾ?

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ‘ಅವರ್ ಬ್ಯೂಟಿಫುಲ್ ಬೇಬಿ ಬಾಯ್ ದೇವ್’ (Our beautiful baby boy Dev) ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಮತ್ತು ಸಿನಿಮಾ ರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ನಟ ವರುಣ್ ಧವನ್, ತಮನ್ನಾ ಭಾಟಿಯಾ, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಹಲವು ತಾರೆಯರು ದಂಪತಿಗೆ ಅಭಿನಂದನೆ ಸಲ್ಲಿಸಿದ್ದು, ಪುಟ್ಟ ಕಂದಮ್ಮನಿಗೆ ಪ್ರೀತಿ ಹಾರೈಸಿದ್ದಾರೆ.

2025ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ

ಸಮಂತಾ ಮತ್ತು ರಾಜ್ ನಿಡಿಮೋರು 2025ರ ಡಿಸೆಂಬರ್ 1ರಂದು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಬಳಿಕ 2026ರ ಜೂನ್‌ನಲ್ಲಿ ‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ತಾಯಿಯಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು ಎನ್ನಲಾಗಿದೆ.

ತಾಯ್ತನವನ್ನು ಆನಂದಿಸುವ ಸಲುವಾಗಿ ಸಿನಿಮಾಗಳಿಂದ ಸ್ವಲ್ಪ ವಿರಾಮ ಪಡೆಯುವುದಾಗಿಯೂ ಅವರು ಹೇಳಿಕೊಂಡಿದ್ದರು. ಈ ವಾರದ ಆರಂಭದಲ್ಲಿಯೂ ದಂಪತಿ ತಮ್ಮ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು ಎಂದು ವರದಿಯಾಗಿದೆ.

ಇದೀಗ ಗಂಡು ಮಗುವಿನ ಆಗಮನದಿಂದ ಸಮಂತಾ ಮತ್ತು ರಾಜ್ ನಿಡಿಮೋರು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

One thought on “ಸಮಂತಾ-ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನನ; ಮುದ್ದಾದ ಫೋಟೋ ಹಂಚಿಕೊಂಡ ನಟಿ!”

Leave a Reply

Your email address will not be published. Required fields are marked *