ಇತ್ತೀಚೆಗೆ ಅಂಬಾನಿ ಕುಟುಂಬ ಆಯೋಜಿಸಿದ್ದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಕತ್ರಿನಾ ಅವರ ದೇಹದ ತೂಕದ ಕುರಿತು ಪಾಕಿಸ್ತಾನಿ ರೇಡಿಯೋ ಜಾಕಿ ಮತ್ತು ಇನ್ಫ್ಲುಯೆನ್ಸರ್ ಇಜಾಜ್ ವಾರಿಸ್ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು.
ಕತ್ರಿನಾ ಕೈಫ್ ಅವರ ದೇಹದ ಆಕಾರದ ಬಗ್ಗೆ ಮಾಡಿದ್ದ ಕಾಮೆಂಟ್‌ಗಳು ಬಾಡಿ ಶೇಮಿಂಗ್ ಆರೋಪಕ್ಕೆ ಕಾರಣವಾಗಿತ್ತು. ಇದೀಗ ಇಜಾಜ್ ವಾರಿಸ್ ಅವರು ಕತ್ರಿನಾ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
‘ಬಿಗ್ ಬಾಸ್ 20’ರ ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ಮಹಿಳೆಯರ ದೇಹದ ಬಗ್ಗೆ ಟ್ರೋಲ್ ಮಾಡುವವರ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಈ ಎಚ್ಚರಿಕೆಯ ಬಳಿಕ ಇಜಾಜ್ ವಾರಿಸ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಗೂ ಸುದೀರ್ಘ ಸಂದೇಶ ಹಂಚಿಕೊಂಡಿರುವ ಇಜಾಜ್ ವಾರಿಸ್, ತಮ್ಮ ಮಾತುಗಳಿಂದ ಕತ್ರಿನಾ ಕೈಫ್ ಹಾಗೂ ಅವರ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.
ವಿಡಿಯೋ ವೀಕ್ಷಣೆ ಹೆಚ್ಚಿಸುವ ಉದ್ದೇಶದಿಂದ ತಮಾಷೆಯಾಗಿ ಆ ರೀತಿ ಮಾತನಾಡಿದ್ದಾಗಿ ಅವರು ಹೇಳಿದ್ದಾರೆ. ಆದರೆ ತಮ್ಮ ಮಾತುಗಳು ಇಷ್ಟೊಂದು ಜನರಿಗೆ ನೋವುಂಟು ಮಾಡಬಹುದು ಎಂದು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇಬ್ಬರೂ ತಮ್ಮ ನೆಚ್ಚಿನ ಕಲಾವಿದರು ಎಂದು ಹೇಳಿರುವ ಇಜಾಜ್ ವಾರಿಸ್, ಸಲ್ಮಾನ್ ಖಾನ್ ಅವರ ಮಾತುಗಳನ್ನು ಕೇಳಿದ ಬಳಿಕ ತಮ್ಮ ತಪ್ಪಿನ ಅರಿವಾಯಿತು ಎಂದು ತಿಳಿಸಿದ್ದಾರೆ.
ಇನ್ನು ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರು, ಮಗು ಜನಿಸಿದ ಬಳಿಕ ಮಹಿಳೆಯರ ದೇಹದಲ್ಲಿ ತೂಕ ಹೆಚ್ಚಾಗುವುದು ಸಹಜ ಎಂದು ಹೇಳಿದ್ದಾರೆ. ಕತ್ರಿನಾ ಈಗ ತಾಯಿಯಾಗಿದ್ದು, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮತ್ತೆ ಸಿನಿಮಾಗಳಿಗೆ ಮರಳಿದಾಗ ಅವರು ಫಿಟ್ ಆಗುತ್ತಾರೆ ಎಂದು ಸಲ್ಮಾನ್ ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.
ಇತರರ ದೇಹದ ಬಗ್ಗೆ ಕಾಮೆಂಟ್ ಮಾಡುವ ಮುನ್ನ ಯೋಚಿಸಬೇಕು ಎಂದು ಸಲ್ಮಾನ್ ಖಾನ್ ನೀಡಿದ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.