ಬೆಟ್ಟದ ಅಂಚಿನಲ್ಲಿ ನಿಂತಿದ್ದ 18 ವರ್ಷದ ಮಗನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಕಣಿವೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಮಗನನ್ನು ರಕ್ಷಿಸಲು ತಂದೆ ಮುಂದಾದ ಕೆಲವೇ ಕ್ಷಣಗಳಲ್ಲಿ ತಾಯಿ ಕೂಡ ಕಣಿವೆಗೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ದೇವ್ಲಾಯಿ ಪ್ರದೇಶದ ನಿವಾಸಿಯಾಗಿದ್ದ 18 ವರ್ಷದ ಯುವಕ ಶುಕ್ರವಾರ ಬೆಳಗ್ಗೆ ಖಾವ್ಡಾ ಬೆಟ್ಟದ ಅಂಚಿಗೆ ತೆರಳಿದ್ದ. ತಾನು ಬೆಟ್ಟದಿಂದ ಜಿಗಿಯುವುದಾಗಿ ಪದೇ ಪದೇ ಹೇಳುತ್ತಿದ್ದ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪೊಲೀಸರು ಆತನನ್ನು ಮನವೊಲಿಸಲು ಸುಮಾರು ಮೂರು ಗಂಟೆಗಳ ಕಾಲ ಪ್ರಯತ್ನಿಸಿದ್ದಾರೆ.
ತಾಯಿ ಕೂಡ ಮಗನಿಗೆ ಪದೇ ಪದೇ ಮನವಿ ಮಾಡಿ, ಬೆಟ್ಟದ ಅಂಚಿನಿಂದ ದೂರ ಬರುವಂತೆ ಕೇಳಿಕೊಂಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಕೂಡ ಆತನನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಯುವಕ ತನ್ನ ನಿರ್ಧಾರ ಬದಲಿಸಲು ಒಪ್ಪಲಿಲ್ಲ ಎನ್ನಲಾಗಿದೆ.
ಕೊನೆಯ 15ರಿಂದ 20 ನಿಮಿಷಗಳಲ್ಲಿ ಕೆಳಗಿನಿಂದ ಮನವಿ ಮಾಡುತ್ತಿದ್ದ ತಂದೆ ಬೆಟ್ಟದ ಮೇಲಕ್ಕೆ ಹತ್ತಿದ್ದಾರೆ. ಮಗನನ್ನು ಅಂಚಿನಿಂದ ಹಿಂದಕ್ಕೆ ಎಳೆಯಲು ಪ್ರಯತ್ನಿಸಿದಾಗ ತಂದೆ ಮತ್ತು ಮಗ ಇಬ್ಬರೂ ಸಮತೋಲನ ಕಳೆದುಕೊಂಡು ಕಣಿವೆಗೆ ಬಿದ್ದಿದ್ದಾರೆ.
ಇದನ್ನು ಕಂಡು ಗಾಬರಿಗೊಂಡ ತಾಯಿಯೂ ಕೆಲವೇ ಕ್ಷಣಗಳಲ್ಲಿ ಕಣಿವೆಗೆ ಬಿದ್ದಿದ್ದಾರೆ. ಪರಿಣಾಮ ತಂದೆ, ತಾಯಿ ಹಾಗೂ 18 ವರ್ಷದ ಮಗ ಮೂವರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಡೆಯುವ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳದಲ್ಲೇ ಇದ್ದರು. ಮಗನನ್ನು ಉಳಿಸಲು ಕುಟುಂಬಸ್ಥರು ಮಾಡಿದ ಮೂರು ಗಂಟೆಗಳ ಪ್ರಯತ್ನ ಕೊನೆಗೆ ದುರಂತದಲ್ಲಿ ಅಂತ್ಯಗೊಂಡಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.