ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದ ವ್ಯಕ್ತಿ; 9 ವರ್ಷಗಳ ನಂತರ ಸಿಕ್ತು 1.36 ಲಕ್ಷ ರೂ. ಪರಿಹಾರ

ತಿರುವನಂತಪುರಂ: ವಿಮಾನ ವಿಳಂಬದಿಂದ ಸೌದಿ ಅರೇಬಿಯಾಗೆ ತೆರಳುವ ಸಂಪರ್ಕ ವಿಮಾನ ತಪ್ಪಿಸಿಕೊಂಡು ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದ ಕೇರಳದ ವ್ಯಕ್ತಿಗೆ, ಸುಮಾರು 9 ವರ್ಷಗಳ ಕಾನೂನು ಹೋರಾಟದ ಬಳಿಕ ನ್ಯಾಯ ಸಿಕ್ಕಿದೆ. ತಿರುವನಂತಪುರಂ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಏರ್ ಇಂಡಿಯಾ ಸಂಸ್ಥೆಗೆ 1.36 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

ಮೂಲತಃ ಕೇರಳದ 42 ವರ್ಷದ ಕಪಿಲ್‌ದೇವ್ ಸೌದಿ ಅರೇಬಿಯಾದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 2017ರ ಸೆಪ್ಟೆಂಬರ್ 10ರಂದು ರಜೆ ಮುಗಿಸಿ ತಿರುವನಂತಪುರಂನಿಂದ ಮುಂಬೈ ಮೂಲಕ ಸೌದಿ ಅರೇಬಿಯಾಗೆ ತೆರಳಲು ಏರ್ ಇಂಡಿಯಾ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ಆದರೆ ತಿರುವನಂತಪುರಂ-ಮುಂಬೈ ವಿಮಾನ ಎರಡು ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು. ಈ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿಯನ್ನು ಕೇಳಿದಾಗ, ಸಂಪರ್ಕ ವಿಮಾನ ತಪ್ಪುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಮುಂಬೈ ತಲುಪುವಷ್ಟರಲ್ಲಿ ಸೌದಿ ಅರೇಬಿಯಾಗೆ ತೆರಳುವ ವಿಮಾನ ಈಗಾಗಲೇ ಹೊರಟಿತ್ತು.

ಮರುದಿನ ಸೌದಿ ಏರ್‌ಲೈನ್ಸ್‌ನಲ್ಲಿ ಉಳಿದಿದ್ದ ಏಕೈಕ ಸೀಟು ಬಿಸಿನೆಸ್ ಕ್ಲಾಸ್‌ನಲ್ಲಿದ್ದ ಕಾರಣ ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಬಳಿಕ ಕುಟುಂಬದವರು ಟ್ರಾವೆಲ್ ಏಜೆನ್ಸಿ ಮೂಲಕ ಸುಮಾರು 49 ಸಾವಿರ ರೂಪಾಯಿ ನೀಡಿ ಹೊಸ ಟಿಕೆಟ್ ಬುಕ್ ಮಾಡಿದರು. ಬಳಕೆಯಾಗದ ಹಳೆಯ ಟಿಕೆಟ್ ಸೇರಿದಂತೆ ಒಟ್ಟು 83 ಸಾವಿರ ರೂಪಾಯಿಗೂ ಹೆಚ್ಚು ನಷ್ಟ ಉಂಟಾಯಿತು ಎಂದು ಕಪಿಲ್‌ದೇವ್ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ ಪೂರ್ತಿ ಕಾಯಬೇಕಾದರೂ ಏರ್ ಇಂಡಿಯಾ ಯಾವುದೇ ಆಹಾರ ಅಥವಾ ವಸತಿ ವ್ಯವಸ್ಥೆ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ತಿರುವನಂತಪುರಂ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ, ಸೇವೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿದ್ದು, ಕಪಿಲ್‌ದೇವ್ ಅವರಿಗೆ ಒಟ್ಟು 1.36 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಏರ್ ಇಂಡಿಯಾಗೆ ಆದೇಶಿಸಿದೆ. ಸುಮಾರು ಒಂಬತ್ತು ವರ್ಷಗಳ ಬಳಿಕ ಅವರಿಗೆ ನ್ಯಾಯ ದೊರೆತಿದೆ.

 

Leave a Reply

Your email address will not be published. Required fields are marked *