‘ಇದು ಐತಿಹಾಸಿಕ ಕ್ರಾಂತಿ’ – ತಂದೆ ವಿಜಯ್ ಗೆಲುವಿನ ಬಗ್ಗೆ ಮೊದಲ ಬಾರಿ ಮಾತನಾಡಿದ ಜೇಸನ್

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿರುವ ಬೆನ್ನಲ್ಲೇ, ಅವರ ಪುತ್ರ ಜೇಸನ್ ಸಂಜಯ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಗೆಲುವನ್ನು “ಐತಿಹಾಸಿಕ ಕ್ರಾಂತಿ” ಎಂದು ಬಣ್ಣಿಸಿರುವ ಜೇಸನ್, ಇದು ತಮ್ಮ ಕುಟುಂಬದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಬಿಹೈಂಡ್‌ವುಡ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೇಸನ್, ‘ನನ್ನ ತಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ನಮ್ಮ ಕುಟುಂಬಕ್ಕೆ ಮರೆಯಲಾಗದ ಕ್ಷಣ. ಇದು ಕೇವಲ ರಾಜಕೀಯ ಗೆಲುವಲ್ಲ, ಐತಿಹಾಸಿಕ ಬದಲಾವಣೆ. ಈಗ ಈ ಪರಂಪರೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

ಚಿತ್ರರಂಗಕ್ಕೆ ಕಾಲಿಡುವ ಮುನ್ನ ತಂದೆ ನೀಡಿದ ಸಲಹೆಯನ್ನೂ ಜೇಸನ್ ನೆನಪಿಸಿಕೊಂಡಿದ್ದಾರೆ. “ನಿನ್ನದೇ ಆದ ಹೆಸರು ಮತ್ತು ಗುರುತನ್ನು ನೀನೇ ಕಟ್ಟಿಕೊಳ್ಳಬೇಕು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಎಲ್ಲವನ್ನೂ ತಯಾರಾಗಿ ಕೊಡುವ ಬದಲು, ಸ್ವತಃ ಅನುಭವ ಪಡೆದು ಕಲಿಯುವಂತೆ ಪ್ರೋತ್ಸಾಹಿಸಿದರು” ಎಂದು ಹೇಳಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ ತಂದೆ ಮಾರ್ಗದರ್ಶನ ನೀಡಿದ್ದರೂ, ಸ್ವಂತ ಪ್ರಯತ್ನದಿಂದ ಮುಂದೆ ಬರಲು ಪ್ರೇರೇಪಿಸಿದ್ದಕ್ಕಾಗಿ ತಾಯಿ, ತಂದೆ ಮತ್ತು ಕುಟುಂಬದವರಿಗೆ ಜೇಸನ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇದೇ ವೇಳೆ, ವಿಜಯ್ ಅವರ ಪ್ರಮಾಣವಚನ ಸಮಾರಂಭಕ್ಕೆ ಪತ್ನಿ ಸಂಗೀತಾ ಹಾಗೂ ಮಕ್ಕಳಾದ ಜೇಸನ್ ಮತ್ತು ದಿವ್ಯಾ ಸಾಶಾ ಗೈರಾಗಿದ್ದ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ. ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಹಲವು ವರದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಕುಟುಂಬದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ಬಿಡುಗಡೆಯ ದಿನಾಂಕ ಬದಲಾಗಿದ್ದು ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.

 

Leave a Reply

Your email address will not be published. Required fields are marked *