ಸೋನಾಕ್ಷಿ ವಿರುದ್ಧ ಕಂಗನಾ ಪರೋಕ್ಷ ಟೀಕೆ? ಧರ್ಮ, ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ

ಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಅವರು ಹಿಂದೂ ಹುಡುಗಿಯರು, ಧರ್ಮ, ಮದುವೆ ಮತ್ತು ಸಿದ್ಧಾಂತಗಳ ಬಗ್ಗೆ ಮಾತನಾಡಿದ್ದು, ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ವಿಡಿಯೋದಲ್ಲಿ ಅವರು ಪರೋಕ್ಷವಾಗಿ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಂಗನಾ ತಮ್ಮ ವಿಡಿಯೋದಲ್ಲಿ, ಚಿತ್ರರಂಗದ ಕೆಲ ಹಿಂದೂ ನಟಿಯರು ಮುಸ್ಲಿಂ ವ್ಯಕ್ತಿಗಳೊಂದಿಗೆ ಸ್ನೇಹ, ಪ್ರೀತಿ ಅಥವಾ ಮದುವೆಯಾದ ಬಳಿಕ ಅವರ ಸಿದ್ಧಾಂತ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹೇಳಿದ್ದಾರೆ. ಯುವಕರಲ್ಲಿ ಇಂತಹ ಬದಲಾವಣೆ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ, ʼನಾನು ಯಾವಾಗಲೂ ಹಿಂದೂ. ಇಂದು ಕೂಡ ದೃಢವಾದ ಹಿಂದೂ ಆಗಿರಲು ಬಯಸುತ್ತೇನೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ನಂಬಲು ನನಗೂ ಹಕ್ಕಿದೆʼ ಎಂದು ಕಂಗನಾ ಹೇಳಿದ್ದಾರೆ. ಹಿಂದೂ ಹುಡುಗಿಯರು ತಮ್ಮ ಧಾರ್ಮಿಕ ನಂಬಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ ಪ್ರಶ್ನೆ ಮಾಡಲಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಹಳೆಯ ಜೀವನವನ್ನು ಉಲ್ಲೇಖಿಸಿದ ಕಂಗನಾ, “ಹೌದು, ನಾನು ಸಿನಿಮಾ ಮಾಡಿದ್ದೇನೆ, ಐಟಂ ಸಾಂಗ್‌ಗಳಲ್ಲೂ ಕಾಣಿಸಿಕೊಂಡಿದ್ದೇನೆ. ಆದರೆ ಇಂದು ನನ್ನ ನಂಬಿಕೆ ಬೇರೆ. ನಾನು ನನ್ನ ಆಲೋಚನೆಗಳನ್ನು ಮುಕ್ತವಾಗಿ ಹೇಳಲು ಬಯಸುತ್ತೇನೆ” ಎಂದಿದ್ದಾರೆ.

ಈ ವಿಡಿಯೋ ವೈರಲ್ ಆದ ಬಳಿಕ, ನೆಟ್ಟಿಗರು ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ಕೆಲವರು ಕಂಗನಾ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದು ಅನಗತ್ಯ ವಿವಾದಕ್ಕೆ ಕಾರಣವಾಗುವ ಹೇಳಿಕೆ ಎಂದು ಟೀಕಿಸಿದ್ದಾರೆ.

ಸದ್ಯ ಕಂಗನಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸೋನಾಕ್ಷಿ ಸಿನ್ಹಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ ಈ ಕುರಿತು ಸೋನಾಕ್ಷಿ ಸಿನ್ಹಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

Leave a Reply

Your email address will not be published. Required fields are marked *