Anushka Marriage: ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ತುಂಬಾ ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಬಾಲ್ಯದ ಮೊದಲ ಪ್ರೀತಿಯ ನೆನಪನ್ನು ಹಂಚಿಕೊಂಡಿದ್ದು, ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ.
ಅನುಷ್ಕಾ ಶೆಟ್ಟಿ ‘ಅರುಂಧತಿ’, ‘ಬಾಹುಬಲಿ’, ‘ರುದ್ರಮದೇವಿ’ ಮತ್ತು ‘ಭಾಗಮತಿ’ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ ‘ಬಾಹುಬಲಿ’ ಬಳಿಕ ಅವರ ಖ್ಯಾತಿ ದೇಶಾದ್ಯಂತ ಮತ್ತಷ್ಟು ಹೆಚ್ಚಾಯಿತು. ಆದರೆ ಇಷ್ಟೊಂದು ದೊಡ್ಡ ಸ್ಟಾರ್ ಆಗಿದ್ದರೂ ತಮ್ಮ ಪರ್ಸನಲ್ ಲೈಫ್ ಬಗ್ಗೆ ಅವರು ಹೆಚ್ಚು ಮಾತನಾಡುವುದಿಲ್ಲ.
6ನೇ ತರಗತಿಯಲ್ಲೇ ಲವ್ ಪ್ರಪೋಸಲ್!
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅನುಷ್ಕಾ, 6ನೇ ತರಗತಿಯಲ್ಲಿದ್ದಾಗ ನಡೆದ ಒಂದು ಮುದ್ದಾದ ಘಟನೆಯನ್ನು ಹೇಳಿಕೊಂಡಿದ್ದಾರೆ. ಒಬ್ಬ ಹುಡುಗ ಅವರ ಬಳಿ ಬಂದು ನೇರವಾಗಿ ‘ಐ ಲವ್ ಯೂ’ ಎಂದು ಹೇಳಿದ್ದನಂತೆ.
ಆದರೆ ಆಗ ಅನುಷ್ಕಾಗೆ ‘ಐ ಲವ್ ಯೂ’ ಅಂದರೆ ಏನು ಎಂಬುದೇ ಸರಿಯಾಗಿ ಗೊತ್ತಿರಲಿಲ್ಲವಂತೆ. ಹೀಗಾಗಿ ಆ ಹುಡುಗನ ಮಾತಿಗೆ ಅವರು ಮುಗ್ಧವಾಗಿ ‘ಸರಿ’ ಎಂದು ಹೇಳಿದ್ದರಂತೆ. ಈ ಘಟನೆ ತಮ್ಮ ಜೀವನದ ಅತ್ಯಂತ ಮುಗ್ಧವಾದ ನೆನಪುಗಳಲ್ಲಿ ಒಂದು ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
ಮದುವೆ ಬಗ್ಗೆ ಏನಂದ್ರು ಅನುಷ್ಕಾ?
ಅನುಷ್ಕಾ ಶೆಟ್ಟಿ ಅವರ ಮದುವೆ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಅದರಲ್ಲೂ ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್ ನಟನ ಜೊತೆ ಅವರ ಹೆಸರು ಆಗಾಗ್ಗೆ ಕೇಳಿಬರುತ್ತದೆ. ಆದರೆ ಇಬ್ಬರೂ ಹಲವು ಬಾರಿ ತಾವು ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ.
ಮದುವೆ ಬಗ್ಗೆ ಮಾತನಾಡಿರುವ ಅನುಷ್ಕಾ, ಮದುವೆ ಎನ್ನುವುದು ಬಹಳ ಪವಿತ್ರವಾದ ಬಂಧ ಎಂದು ಹೇಳಿದ್ದಾರೆ. ಸರಿಯಾದ ವ್ಯಕ್ತಿ ಸಿಕ್ಕಾಗ ಮದುವೆ ಸಹಜವಾಗಿ ನಡೆಯುತ್ತದೆ ಎಂಬ ನಂಬಿಕೆ ಅವರದ್ದು.
ತಮ್ಮ ಮದುವೆಯ ವಿಚಾರವನ್ನು ಪೋಷಕರಿಗೆ ಬಿಟ್ಟಿದ್ದೇನೆ ಎಂದಿರುವ ಅವರು, ಮದುವೆ ನಿಶ್ಚಯವಾದಾಗ ಅದನ್ನು ಎಲ್ಲರಿಗೂ ಮುಕ್ತವಾಗಿ ತಿಳಿಸುವುದಾಗಿ ಹೇಳಿದ್ದಾರೆ.
ಯೋಗ ಟೀಚರ್ ಆಗಿದ್ದ ಅನುಷ್ಕಾ
ಚಿತ್ರರಂಗಕ್ಕೆ ಬರುವ ಮೊದಲು ಅನುಷ್ಕಾ ಮುಂಬೈನಲ್ಲಿ ಯೋಗ ಬೋಧಕಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ತೆಲುಗಿನ ‘ಸೂಪರ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
15 ವರ್ಷಗಳಿಗೂ ಹೆಚ್ಚು ಕಾಲದ ಸಿನಿ ಜರ್ನಿಯಲ್ಲಿ ಗ್ಲಾಮರ್ ಪಾತ್ರಗಳಿಗೆ ಮಾತ್ರ ಸೀಮಿತವಾಗದೆ, ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ‘ಅರುಂಧತಿ’ಯಂತಹ ಸಿನಿಮಾಗಳ ಯಶಸ್ಸಿನ ಬಳಿಕ ಅವರು ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ಸ್ಟಾರ್ ಎಂಬ ಇಮೇಜ್ ಪಡೆದುಕೊಂಡರು.
ಸದ್ಯ ಅನುಷ್ಕಾ ಸಿನಿಮಾ ಆಯ್ಕೆಗಳಲ್ಲಿ ಹೆಚ್ಚು ಜಾಗರೂಕರಾಗಿದ್ದಾರೆ. ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮದ ಗಾಸಿಪ್ಗಳಿಂದ ದೂರವಿರುವ ಅವರು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಡುವ ವದಂತಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.