ಆಗಸದಿಂದ 300 ಅಡಿ ಕುಸಿದ ಏರ್ ಇಂಡಿಯಾ ವಿಮಾನ; 14 ಮಂದಿಗೆ ಗಾಯ

ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಹಾರಾಟದ ವೇಳೆ ತೀವ್ರ ಗಾಳಿಗೆ ಸಿಲುಕಿ ಏಕಾಏಕಿ ಸುಮಾರು 300 ಅಡಿ ಕೆಳಕ್ಕೆ ಕುಸಿದ ಘಟನೆ ನಡೆದಿದೆ. ಈ ವೇಳೆ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 14 ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಘಟನೆಯ ವೇಳೆ ಸೀಟ್‌ ಬೆಲ್ಟ್‌ ಧರಿಸದಿದ್ದ ಕೆಲ ಪ್ರಯಾಣಿಕರು ಮತ್ತು ಕರ್ತವ್ಯದಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ವಿಮಾನದ ಸೀಲಿಂಗ್‌ಗೆ ಬಡಿದು ಗಾಯಗೊಂಡಿದ್ದಾರೆ. ವಿಮಾನ ಇದ್ದಕ್ಕಿದ್ದಂತೆ ಕೆಳಕ್ಕೆ ಧುಮುಕಿದ್ದರಿಂದ ಒಳಗಿದ್ದ ಪ್ರಯಾಣಿಕರಲ್ಲಿ ಕೆಲ ಕ್ಷಣ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಮಾನ ಲ್ಯಾಂಡ್ ಆಗುವ ಮುನ್ನವೇ ಪೈಲಟ್ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹೀಗಾಗಿ ವೈದ್ಯಕೀಯ ತಂಡಗಳು ಮೊದಲೇ ಸಜ್ಜಾಗಿದ್ದವು. ವಿಮಾನ ಇಳಿದ ತಕ್ಷಣ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರಗಳಲ್ಲಿ ವಿಮಾನದ ಒಳಭಾಗದ ಸೀಲಿಂಗ್ ಪ್ಯಾನೆಲ್‌ಗಳು ಜಖಂಗೊಂಡಿರುವುದು ಕಾಣಿಸಿಕೊಂಡಿದೆ. ಘಟನೆಯ ನಂತರ ಕೆಲವು ಪ್ರಯಾಣಿಕರು ಏರ್ ಇಂಡಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಏರ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ AI2379 ವಿಮಾನ ತೀವ್ರ ಗಾಳಿಗೆ ಸಿಲುಕಿದ ಕಾರಣ ಕೆಲ ಕ್ಷಣ ಅಸ್ಥಿರವಾಗಿ ಚಲಿಸಿತು ಎಂದು ತಿಳಿಸಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಘಟನೆ ಕುರಿತು ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

 

Leave a Reply

Your email address will not be published. Required fields are marked *