ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋ ತಾತ್ಕಾಲಿಕವಾಗಿ ಡಿಲೀಟ್ ಆಗಿದ್ದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ತೀವ್ರ ಆಕ್ಷೇಪದ ಬಳಿಕ, ಮೆಟಾ (ಫೇಸ್‌ಬುಕ್-ಇನ್‌ಸ್ಟಾಗ್ರಾಮ್) ಸಿಇಒ ಮಾರ್ಕ್ ಝುಕರ್‌ಬರ್ಗ್ ಇದೀಗ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಠಿಣ ಕ್ರಮದ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರ ಸೆಲ್ಫಿ ವಿಡಿಯೋ ಕೆಲಕಾಲ ಫೇಸ್‌ಬುಕ್‌ನಿಂದ ತೆಗೆದುಹಾಕಲಾಗಿತ್ತು. ಈ ಘಟನೆಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮೆಟಾ ಅಧಿಕಾರಿಗಳಿಗೆ ಸಮನ್ಸ್ ನೀಡಿತ್ತು.
ಇದರ ಬೆನ್ನಲ್ಲೇ ಮೆಟಾದ ಜಾಗತಿಕ ನಿಯೋಗವು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿತು. ಸಭೆಯ ಬಳಿಕ ಮಾರ್ಕ್ ಝುಕರ್‌ಬರ್ಗ್, ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ದೋಷಗಳು, ಡೀಪ್‌ಫೇಕ್ ಹಾಗೂ ಬಾಲ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆಯಲ್ಲಿನ ಲೋಪಗಳಿಗಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ.
ಸಭೆಯಲ್ಲಿ ಸಚಿವ ಅಶ್ವಿನಿ ವೈಷ್ಣವ್, ಭಾರತದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮಕ್ಕಳ ಮೇಲಿನ ದೌರ್ಜನ್ಯ, ಡೀಪ್‌ಫೇಕ್ ಹಾಗೂ ಕಾನೂನುಬಾಹಿರ ವಿಷಯಗಳ ವಿರುದ್ಧ ಮೆಟಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಾಮಾಜಿಕ ಜಾಲತಾಣಗಳು ಯಾವ ವಿಷಯವನ್ನು ಯಾರಿಗೆ ತೋರಿಸಬೇಕು ಎಂದು ತಾವೇ ನಿರ್ಧರಿಸಿದರೆ, ಅವುಗಳಿಗೆ ಐಟಿ ಕಾಯ್ದೆಯಡಿ ದೊರೆಯುವ ‘ಸೇಫ್ ಹಾರ್ಬರ್’ ರಕ್ಷಣೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ಮೂರು ದಿನಗಳಲ್ಲಿ ಮೆಟಾ ಅಧಿಕಾರಿಗಳೊಂದಿಗೆ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಪ್ರಧಾನಿ ಮೋದಿ ಅವರ ವಿಡಿಯೋ ಡಿಲೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳೊಳಗೆ ಕ್ಷಮೆಯಾಚಿಸಬೇಕು ಎಂದು ಸಂಸದೀಯ ಸಮಿತಿಯೂ ಸೂಚಿಸಿತ್ತು. ಈ ಗಡುವಿನೊಳಗೆ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಕೋರಿದ್ದಾರೆ.