ವೈಟ್‌ ರೈಸ್‌ ತಿಂದರೆ ನಿಜವಾಗ್ಲೂ ದಪ್ಪ ಆಗ್ತಾರಾ? ಬೊಜ್ಜು ಕರಗಿಸೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

Weight Loss Tips: ತೂಕ ಇಳಿಸಿಕೊಳ್ಳಬೇಕು ಅಂದರೆ ಮೊದಲು ಬಿಳಿ ಅನ್ನ ಬಿಡಬೇಕು ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತದೆ. ಆದರೆ ನಿಜಕ್ಕೂ ಬಿಳಿ ಅನ್ನವೇ ತೂಕ ಹೆಚ್ಚಾಗಲು ಕಾರಣವೇ? ಈ ಪ್ರಶ್ನೆಗೆ ಪೌಷ್ಟಿಕ ತಜ್ಞರು ಕೊಟ್ಟ ಉತ್ತರ ಹಲವರನ್ನು ಅಚ್ಚರಿ ಪಡಿಸಬಹುದು.

ತಜ್ಞರ ಪ್ರಕಾರ, ಬಿಳಿ ಅನ್ನ ಮಾತ್ರ ತಿಂದರೆ ದಪ್ಪ ಆಗುವುದಿಲ್ಲ. ದೇಹಕ್ಕೆ ಬೇಕಾದಕ್ಕಿಂತ ಹೆಚ್ಚು ಕ್ಯಾಲೊರಿ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ಕೇವಲ ಒಂದು ಆಹಾರದಿಂದಲ್ಲ, ಒಟ್ಟಾರೆ ಆಹಾರ ಪದ್ಧತಿ, ವ್ಯಾಯಾಮ ಮತ್ತು ಜೀವನಶೈಲಿಯೇ ತೂಕದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.

ಬಿಳಿ ಅಕ್ಕಿ ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲವಾಗಿದೆ. ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಕಂದು ಅಕ್ಕಿಗೆ ಹೋಲಿಸಿದರೆ ಬಿಳಿ ಅಕ್ಕಿಯಲ್ಲಿ ಫೈಬರ್ ಕಡಿಮೆ ಇರುವುದು ನಿಜ. ಆದರೆ ಅದರಿಂದ ಅದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲು ಸಾಧ್ಯವಿಲ್ಲ. ಸರಿಯಾದ ಪ್ರಮಾಣದಲ್ಲಿ ತಿಂದರೆ ಅದು ಆರೋಗ್ಯಕರ ಆಹಾರದ ಭಾಗವಾಗಬಹುದು.

ಕೆಲವು ಅಧ್ಯಯನಗಳು ಹೆಚ್ಚು ಪ್ರಮಾಣದಲ್ಲಿ ಬಿಳಿ ಅನ್ನ ತಿಂದರೆ ತೂಕ ಹೆಚ್ಚಾಗಬಹುದು ಎಂದು ಹೇಳಿದರೆ, ಇನ್ನೂ ಕೆಲವು ಅಧ್ಯಯನಗಳಲ್ಲಿ ಅಂತಹ ಸ್ಪಷ್ಟ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ, ಬಿಳಿ ಅನ್ನವೇ ನೇರವಾಗಿ ಬೊಜ್ಜಿಗೆ ಕಾರಣ ಎಂದು ಹೇಳಲು ವೈಜ್ಞಾನಿಕ ಪುರಾವೆಗಳು ಸಾಕಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅನ್ನ ತಿನ್ನುವಾಗ ಅದರ ಜೊತೆಗೆ ಬೇಳೆ, ಸಾಂಬಾರ್, ಹಸಿರು ತರಕಾರಿ, ಮೊಸರು, ಮೊಟ್ಟೆ, ಮೀನು, ಚಿಕನ್ ಅಥವಾ ಪನೀರ್ ಸೇರಿಸಿದರೆ ದೇಹಕ್ಕೆ ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳು ಸಿಗುತ್ತವೆ. ಇದರಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿದ ಅನುಭವವಾಗುತ್ತದೆ.

ಅನ್ನ ಬೇಯಿಸುವ ವಿಧಾನವೂ ಮುಖ್ಯ. ಸರಳವಾಗಿ ಬೇಯಿಸಿದ ಅನ್ನಕ್ಕಿಂತ ಹೆಚ್ಚು ಎಣ್ಣೆ, ತುಪ್ಪ ಅಥವಾ ಬೆಣ್ಣೆ ಹಾಕಿ ಮಾಡುವ ಫ್ರೈಡ್ ರೈಸ್, ಪಲಾವ್ ಮತ್ತು ಬಿರಿಯಾನಿಯಲ್ಲಿ ಕ್ಯಾಲೊರಿ ಹೆಚ್ಚು ಇರುತ್ತದೆ. ಇವುಗಳನ್ನು ಆಗಾಗ ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ತೂಕ ನಿಯಂತ್ರಣಕ್ಕೆ ಕೆಲ ಸರಳ ಅಭ್ಯಾಸಗಳನ್ನು ಪಾಲಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ. ಒಂದೇ ಬಾರಿ ಹೆಚ್ಚು ತಿನ್ನಬಾರದು. ಪ್ರತಿಯೊಂದು ಊಟದಲ್ಲೂ ತರಕಾರಿ, ಸಲಾಡ್ ಮತ್ತು ಪ್ರೋಟೀನ್ ಆಹಾರ ಸೇರಿಸಬೇಕು. ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡಬೇಕು. ತಂಪು ಪಾನೀಯ, ಸಿಹಿತಿಂಡಿ ಮತ್ತು ಪ್ಯಾಕೆಟ್ ಜ್ಯೂಸ್ ಕಡಿಮೆ ಸೇವಿಸಬೇಕು. ಜೊತೆಗೆ ಸಾಕಷ್ಟು ನಿದ್ರೆ ಮತ್ತು ಒತ್ತಡ ನಿಯಂತ್ರಣಕ್ಕೂ ಗಮನ ಕೊಡಬೇಕು.

ಮಧುಮೇಹ, ಬೊಜ್ಜು ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಇರುವವರು ಮಾತ್ರ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಅನ್ನದ ಪ್ರಮಾಣವನ್ನು ನಿಗದಿಪಡಿಸಿಕೊಳ್ಳುವುದು ಉತ್ತಮ. ಬಿಳಿ ಅನ್ನವನ್ನು ಸಂಪೂರ್ಣ ಬಿಡುವುದಕ್ಕಿಂತ, ಮಿತವಾಗಿ ಮತ್ತು ಸಮತೋಲಿತ ಆಹಾರದೊಂದಿಗೆ ಸೇವಿಸುವುದೇ ಆರೋಗ್ಯಕರ ಆಯ್ಕೆ ಎಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *