ಫ್ಯಾನ್ಸ್‌ಗೆ ದೀಪಾವಳಿ ಸರ್ಪ್ರೈಸ್‌ – ಮೊದಲ ಬಾರಿ ಮಗನ ಜೊತೆ ಫೋಟೋ ಹಂಚಿಕೊಂಡ ವಿಕ್ಕಿ-ಕತ್ರಿನಾ

ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಾಲಿವುಡ್‌ನ ಮುದ್ದಾದ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಈ ಬಾರಿಯ ದೀಪಾವಳಿ ಪ್ರಯುಕ್ತ ದಂಪತಿ ತಮ್ಮ ಮಗನ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ಈ ದೀಪಾವಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ತಮ್ಮ ಮುದ್ದಿನ ಮಗ ವಿಹಾನ್ ಜೊತೆಗಿನ ಕುಟುಂಬದ ಫೋಟೋವನ್ನು ಹಂಚಿಕೊಂಡು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಗನ ಮೊದಲ ಹುಟ್ಟುಹಬ್ಬದ ಮರುದಿನವೇ ಈ ಸುಂದರ ಫೋಟೋವನ್ನು ಹಂಚಿಕೊಂಡಿದ್ದು, ಮೂವರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.

‘ನಮ್ಮ ಪಾಲಿನ ಅತ್ಯಂತ ಪ್ರಕಾಶಮಾನವಾದ ದೀಪಾವಳಿ’

ಕತ್ರಿನಾ ಕೈಫ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡು, ‘ನಮ್ಮ ಪಾಲಿನ ಅತ್ಯಂತ ಪ್ರಕಾಶಮಾನವಾದ ದೀಪಾವಳಿ ಇದು. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷ ಸಿಗಲಿ’ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಪುಟ್ಟ ವಿಹಾನ್ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಕ್ರೀಮ್ ಬಣ್ಣದ ಕುರ್ತಾ-ಪೈಜಾಮ ಹಾಗೂ ಹಳದಿ ಬಣ್ಣದ ನೆಹರೂ ಜಾಕೆಟ್ ಧರಿಸಿರುವ ವಿಹಾನ್, ತಂದೆ-ತಾಯಿಯ ನಡುವೆ ನಿಂತು ಕ್ಯಾಮೆರಾಗೆ ಮುಗುಳ್ನಗೆ ಬೀರಿದ್ದಾನೆ. ಹಳದಿ ಬಣ್ಣದ ಕಸೂತಿ ಉಡುಪಿನಲ್ಲಿ ಕಂಗೊಳಿಸುತ್ತಿರುವ ಕತ್ರಿನಾ, ಮಗನನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ಇತ್ತ ವಿಕ್ಕಿ ಕೌಶಲ್ ಕ್ರೀಮ್ ಬಣ್ಣದ ಕುರ್ತಾ ಧರಿಸಿ ಮಗನ ಪಕ್ಕದಲ್ಲಿ ಕುಳಿತು ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ.

ನವೆಂಬರ್ 7ರಂದು ವಿಹಾನ್‌ಗೆ ಮೊದಲ ಹುಟ್ಟುಹಬ್ಬ

ನವೆಂಬರ್ 7ರಂದು ವಿಹಾನ್‌ಗೆ ಒಂದು ವರ್ಷ ತುಂಬಿದೆ. ವಿಕ್ಕಿ ಮತ್ತು ಕತ್ರಿನಾ 2025ರ ನವೆಂಬರ್ 7ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಇದಕ್ಕೂ ಮುನ್ನ 2025ರ ಸೆಪ್ಟೆಂಬರ್‌ನಲ್ಲಿ ಕತ್ರಿನಾ ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಹಂಚಿಕೊಂಡಿದ್ದರು.

ಮಗನಿಗೆ ‘ವಿಹಾನ್ ಕೌಶಲ್’ ಎಂದು ಹೆಸರಿಟ್ಟ ದಂಪತಿ

2026ರ ಜನವರಿಯಲ್ಲಿ ಮಗನ ಪುಟ್ಟ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದ ದಂಪತಿ, ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟಿರುವುದಾಗಿ ಅಧಿಕೃತವಾಗಿ ತಿಳಿಸಿದ್ದರು.

ವಿಶೇಷವೆಂದರೆ, 2019ರಲ್ಲಿ ಬಿಡುಗಡೆಯಾದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಮೇಜರ್ ವಿಹಾನ್ ಸಿಂಗ್ ಶೇರ್‌ಗಿಲ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ತಮ್ಮ ನೆಚ್ಚಿನ ಪಾತ್ರದ ಹೆಸರನ್ನೇ ಮಗನಿಗೆ ಇಟ್ಟಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *