ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಶೋ ಮಧ್ಯೆಯೇ ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದಿದ್ದ ಮಾಡ್ರನ್ ಮಹಾಕವಿ ಮಂಜ (Modern Mahakavi Manja) ಮತ್ತೆ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಮಂಜು ಅವರ ಮರುಪ್ರವೇಶದ ಮೂಲಕ ದೀಪಾವಳಿ ಹಬ್ಬದಂದು ಬಿಗ್‌ಬಾಸ್ ವೀಕ್ಷಕರಿಗೆ ಸರ್ಪ್ರೈಸ್ ಸಿಗುವ ಸಾಧ್ಯತೆಯಿದೆ. ಬಿಗ್‌ಬಾಸ್ ಅಗ್ನಿಪರೀಕ್ಷೆ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಮಾಡ್ರನ್ ಮಹಾಕವಿ ಮಂಜ, ತಮ್ಮ ಮಾತು ಮತ್ತು ಕವನಗಳ ಮೂಲಕ ಗಮನ ಸೆಳೆದಿದ್ದರು. ಸೆಲೆಬ್ರಿಟಿ ಸ್ಪರ್ಧಿಗಳಿಗೂ ಟಕ್ಕರ್ ನೀಡುವಂತೆ ಮಾತನಾಡುತ್ತಿದ್ದ ಅವರು, ತಮ್ಮದೇ ಶೈಲಿಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು.
ಅವಾಚ್ಯ ಪದ ಬಳಸಿ ಮನೆಯಿಂದ ಔಟ್ ಆಗಿದ್ದ ಮಂಜು
ಬಿಗ್‌ಬಾಸ್ ಮನೆಯಲ್ಲಿದ್ದಾಗ ಮೂಲ ನಿಯಮ ಉಲ್ಲಂಘಿಸಿದ ಆರೋಪದಡಿ ಮಂಜು ಶೋನಿಂದ ಹೊರಬಂದಿದ್ದರು. ಆರಂಭದಲ್ಲಿ ಸಹಸ್ಪರ್ಧಿ ಸೌಂದರ್ಯ ಅವರೊಂದಿಗೆ ಜಗಳವಾಡುವ ಸಂದರ್ಭದಲ್ಲಿ ನಿಂದನಾತ್ಮಕ ಪದಗಳನ್ನು ಬಳಸಿದ್ದಕ್ಕೆ ನಿರೂಪಕ ಕಿಚ್ಚ ಸುದೀಪ್ ಅವರಿಂದ ಎಚ್ಚರಿಕೆ ಪಡೆದಿದ್ದರು.
ಆದರೆ, ಮತ್ತೊಮ್ಮೆ ಟಾಸ್ಕ್ ವೇಳೆ ಯಶಸ್ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪದ ಹಿನ್ನೆಲೆಯಲ್ಲಿ ಮಂಜುಗೆ ಮನೆಯಿಂದ ಹೊರಹೋಗುವಂತೆ ಸೂಚಿಸಲಾಗಿತ್ತು.
ಇದೀಗ ದೀಪಾವಳಿ ಹಬ್ಬದಂದು ಮಂಜು ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ಅವರು ಮತ್ತೆ ಸ್ಪರ್ಧಿಯಾಗಿ ದೊಡ್ಮನೆಗೆ ಪ್ರವೇಶಿಸುತ್ತಾರಾ ಅಥವಾ ಅತಿಥಿಯಾಗಿ ಬಂದು ಹೋಗುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದ ಬಳಿಕವೇ ಸ್ಪಷ್ಟತೆ ಸಿಗಲಿದೆ.


