ಚೆನ್ನೈ: ತಮಿಳುನಾಡಿನ ಮಧುರೈ ಸಮೀಪದ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಐತಿಹಾಸಿಕ ಕಾರ್ತಿಕ ದೀಪೋತ್ಸವ ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿದೆ. ಬೆಟ್ಟದ ಶಿಖರದಲ್ಲಿ ಪವಿತ್ರ ದೀಪ ಬೆಳಗುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಈ ಸುಂದರ ಕ್ಷಣವನ್ನು ಸ್ಥಳೀಯರು ಹಾಗೂ ಭಕ್ತರು ಕಣ್ತುಂಬಿಕೊಂಡರು.
ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸಂಜೆ ಸರಿಯಾಗಿ 5 ಗಂಟೆಗೆ ಬೆಟ್ಟದ ಮೇಲಿರುವ ದೀಪತ್ತೂನ್ ಸ್ತಂಭದಲ್ಲಿ ಪವಿತ್ರ ದೀಪವನ್ನು ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ, ಅನುಮತಿ ಪಡೆದ 50 ಭಕ್ತರು ಕೂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ದೀಪಾರಾಧನೆ ನೆರವೇರಿಸಲಾಯಿತು. ಬೆಟ್ಟದ ಎತ್ತರದಲ್ಲಿ ದೀಪ ಬೆಳಗುತ್ತಿದ್ದಂತೆ ಅದರ ಬೆಳಕು ಸುತ್ತಮುತ್ತಲಿನ ಪ್ರದೇಶಕ್ಕೂ ಹರಡಿತು. ದೂರದಿಂದಲೇ ದೀಪದ ಜ್ಯೋತಿಯನ್ನು ಕಂಡ ಜನರು ಭಕ್ತಿಭಾವದಿಂದ ಕೈಮುಗಿದು ಪ್ರಾರ್ಥಿಸಿದರು.
ಇನ್ನು ದೀಪೋತ್ಸವದ ವೇಳೆ ಭಕ್ತರು ‘ಮುರುಗನಿಗೆ ಹರೋಹರ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಕಾರ್ತಿಕ ಮಾಸದ ಈ ಪವಿತ್ರ ಆಚರಣೆಯಲ್ಲಿ ಭಾಗಿಯಾಗಲು ಸಾಧ್ಯವಾಗದವರೂ ದೀಪದ ಬೆಳಕನ್ನು ದೂರದಿಂದಲೇ ಕಣ್ತುಂಬಿಕೊಂಡರು.
ಒಟ್ಟಿನಲ್ಲಿ, ಭಕ್ತಿ, ನಂಬಿಕೆ ಮತ್ತು ಸಂಪ್ರದಾಯದ ಸಂಕೇತವಾಗಿರುವ ತಿರುಪ್ಪರಂಕುಂದ್ರಂ ಬೆಟ್ಟದ ಕಾರ್ತಿಕ ದೀಪೋತ್ಸವ ಈ ಬಾರಿ ವಿಶೇಷ ಗಮನ ಸೆಳೆದಿದೆ.


