ನವದೆಹಲಿ: ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆ ನೀಡಲಾಗಿದೆ. ಸಬ್ಸಿಡಿ ಸಹಿತ ನಿಗದಿತ ದರದಲ್ಲಿ ಸಿಲಿಂಡರ್ ಬುಕ್ ಮಾಡಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿರಬೇಕು. ಈ ನಿಯಮ ಅಕ್ಟೋಬರ್ 1ರಿಂದಲೇ ಜಾರಿಯಲ್ಲಿದ್ದು, ಇನ್ನೂ ಪ್ರಕ್ರಿಯೆ ಪೂರ್ಣಗೊಳಿಸದ ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?
ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿದ ಗ್ರಾಹಕರು ಮತ್ತೆ ಈ ಪ್ರಕ್ರಿಯೆ ಮಾಡಿಸುವ ಅಗತ್ಯವಿಲ್ಲ. ಆದರೆ ದೃಢೀಕರಣ ಬಾಕಿ ಇರುವವರು ಸಬ್ಸಿಡಿ ಸಹಿತ ನಿಗದಿತ ದರದಲ್ಲಿ ಸಿಲಿಂಡರ್ ಬುಕ್ ಮಾಡಲು ಅದನ್ನು ಪೂರ್ಣಗೊಳಿಸಬೇಕು.
ಇ-ಕೆವೈಸಿ ಮಾಡಿಸದಿದ್ದರೂ ಗ್ಯಾಸ್ ಸಿಗುವುದೇ ಇಲ್ಲ ಎಂಬುದು ಸರಿಯಲ್ಲ. ಅಧಿಕೃತ ಪ್ರಕಟಣೆಯ ಪ್ರಕಾರ, ದೃಢೀಕರಣ ಮಾಡಿಸದಿರಲು ಅಥವಾ ಮಾಡಿಸಲು ಸಾಧ್ಯವಾಗದಿರಲು ಆಯ್ಕೆ ದಾಖಲಿಸುವ ಗ್ರಾಹಕರಿಗೆ ಮಾರುಕಟ್ಟೆ ದರದಲ್ಲಿ, ಸಬ್ಸಿಡಿ ಇಲ್ಲದೆ, ಸ್ಥಳೀಯ ಲಭ್ಯತೆಗೆ ಅನುಗುಣವಾಗಿ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್ ನೀಡಬಹುದು.
ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡುವುದು ಹೇಗೆ?
ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬಹುದು. ಇದಕ್ಕಾಗಿ ಆ್ಯಧಾರ್ ಫೇಸ್ಆರ್ಡಿ (Aadhaar FaceRD) ಆ್ಯಪ್ ಕೂಡ ಅಗತ್ಯವಾಗಬಹುದು.
- ಇಂಡೇನ್ (Indane): IndianOil ONE ಆ್ಯಪ್
- ಭಾರತ್ಗ್ಯಾಸ್ (Bharatgas): HelloBPCL ಆ್ಯಪ್
- ಎಚ್ಪಿ ಗ್ಯಾಸ್ (HP Gas): HP PAY ಆ್ಯಪ್
ಆ್ಯಪ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ನಿಮ್ಮ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ದೃಢೀಕರಣ ಮಾಡಿಸಬಹುದು. ಸಿಲಿಂಡರ್ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿಯ ಸಹಾಯದಿಂದಲೂ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ.
ಇ-ಕೆವೈಸಿಗೆ ಹಣ ಪಾವತಿಸಬೇಕೇ?
ಗ್ಯಾಸ್ ಗ್ರಾಹಕರ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಸಬಹುದು. ಇದಕ್ಕಾಗಿ ಯಾರಾದರೂ ಹಣ ಕೇಳಿದರೆ, ಸಂಬಂಧಪಟ್ಟ ಗ್ಯಾಸ್ ಕಂಪನಿಯ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಗ್ರಾಹಕರು ಏನು ಮಾಡಬೇಕು?
ನಿಮ್ಮ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಈಗಾಗಲೇ ಪೂರ್ಣಗೊಂಡಿದೆಯೇ ಎಂಬುದನ್ನು ಮೊದಲು ಪರಿಶೀಲಿಸಿ. ಪೂರ್ಣಗೊಂಡಿದ್ದರೆ ಮತ್ತೆ ಮಾಡಿಸುವ ಅಗತ್ಯವಿಲ್ಲ. ಬಾಕಿ ಇದ್ದರೆ ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಅಥವಾ ವಿತರಕರ ಕಚೇರಿಯ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಿ.
ಗ್ಯಾಸ್ ಸೇವೆಗೆ ಸಂಬಂಧಿಸಿದ ಸಹಾಯಕ್ಕಾಗಿ 1800 2333 555 ಎಂಬ ಟೋಲ್ಫ್ರೀ ಸಂಖ್ಯೆಯನ್ನು ಸಂಪರ್ಕಿಸಬಹುದು.