Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ಒಂದು ವಾರವಷ್ಟೇ ಕಳೆದಿದೆ. ಎರಡನೇ ವಾರಕ್ಕೆ ಶೋ ಕಾಲಿಟ್ಟ ಬೆನ್ನಲ್ಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಮನೆಯಲ್ಲಿ ಇದ್ದ ಕಡಿಮೆ ಸಮಯದಲ್ಲೇ ಓಂ ಪ್ರಕಾಶ್ ರಾವ್ ತಮ್ಮ ಮಾತು, ಕಾಮಿಡಿ ಹಾಗೂ ವಿಭಿನ್ನ ರೀತಿಯ ವರ್ತನೆಯಿಂದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹೀಗಾಗಿ ಅವರು ಮತ್ತೆ ಬಿಗ್‌ಬಾಸ್ ಮನೆಗೆ ವಾಪಸ್ ಬರ್ತಾರಾ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿದೆ.
ಈ ಬಗ್ಗೆ ಇದೀಗ ಟಿವಿ9 ಜೊತೆ ಮಾತನಾಡಿರುವ ಓಂ ಪ್ರಕಾಶ್ ರಾವ್, ಮತ್ತೆ ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಮೊದಲಿನಿಂದಲೂ ಶುಗರ್, ಬಿಪಿ ಇತ್ತು
ತಮ್ಮ ಆರೋಗ್ಯದ ಬಗ್ಗೆ ಮಾತನಾಡಿರುವ ಓಂ ಪ್ರಕಾಶ್ ರಾವ್, ಮೊದಲಿನಿಂದಲೂ ಶುಗರ್ ಮತ್ತು ಬಿಪಿ ಇರುವುದಾಗಿ ತಿಳಿಸಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗುವ ಮುನ್ನವೇ ತಮ್ಮ ಮೆಡಿಕಲ್ ರಿಪೋರ್ಟ್‌ಗಳನ್ನು ಶೋ ತಂಡಕ್ಕೆ ನೀಡಿದ್ದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ದಿನಗಳು ಕಳೆದಂತೆ ಕಾಲಿನಲ್ಲಿ ನೋವು ಶುರುವಾಯಿತು.
ಈ ಕಾಲು ನೋವಿನ ಸಮಸ್ಯೆ ಮೊದಲಿನಿಂದಲೂ ಇತ್ತು. ಆದರೆ ಶುಕ್ರವಾರದ ವೇಳೆಗೆ ನೋವು ಹೆಚ್ಚಾಯಿತು ಎಂದು ಅವರು ಹೇಳಿದ್ದಾರೆ.
ಸುದೀಪ್‌ಗಾಗಿ ನೋವು ಸಹಿಸಿಕೊಂಡಿದ್ರಂತೆ
ಶನಿವಾರ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಮನೆಗೆ ಬರುತ್ತಾರೆ. ಅವರ ಶೋ ಮಿಸ್ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ನೋವು ಇದ್ದರೂ ಮನೆಯಲ್ಲಿ ಉಳಿದುಕೊಂಡಿದ್ದೆ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಆದರೆ ಶನಿವಾರದ ವೇಳೆಗೆ ಕಾಲು ನೋವು ಮತ್ತು ಊತ ಎರಡೂ ಹೆಚ್ಚಾಗಿತ್ತು. ಸಾಕಷ್ಟು ತಡೆದುಕೊಂಡ ನಂತರವೂ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಬಿಗ್‌ಬಾಸ್ ತಂಡಕ್ಕೆ ತಿಳಿಸಿದಾಗ ಅವರು ಬಂದು ಪರೀಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೊದಲಿಗೆ ಒಂದು ದಿನ ಅಲ್ಲಿಯೇ ಚಿಕಿತ್ಸೆ ನೀಡಲಾಯಿತು. ನಂತರ ಕುಟುಂಬ ವೈದ್ಯರ ಸಲಹೆ ಪಡೆದು ತಮ್ಮ ಅನುಕೂಲದ ಆಸ್ಪತ್ರೆಗೆ ದಾಖಲಾಗಿದ್ದಾಗಿ ಅವರು ತಿಳಿಸಿದ್ದಾರೆ.
ಮತ್ತೆ ಬಿಗ್‌ಬಾಸ್‌ಗೆ ಹೋಗ್ತಾರಾ
ಓಂ ಪ್ರಕಾಶ್ ರಾವ್ ಅವರ ರೀ-ಎಂಟ್ರಿ ಬಗ್ಗೆ ಕೇಳಿದಾಗ ಅವರು ಕುತೂಹಲ ಮೂಡಿಸುವ ಉತ್ತರ ನೀಡಿದ್ದಾರೆ.
“ನಾನು ಗೆಲ್ಲಬೇಕೆಂದು ಶೋಗೆ ಹೋಗಿರಲಿಲ್ಲ. ಒಪ್ಪಂದದ ಪ್ರಕಾರ ವಾರದ ಸಂಭಾವನೆ ಕೊಟ್ಟರೆ ಸಾಕಿತ್ತು. ಗೆಲುವಿಗಾಗಿ ಕಿತ್ತಾಡುವ ವ್ಯಕ್ತಿ ನಾನಲ್ಲ” ಎಂದು ಹೇಳಿದ್ದಾರೆ.
ಅನಾರೋಗ್ಯದ ಕಾರಣ ಈಗ ಶೋನಿಂದ ಹೊರಬಂದಿದ್ದೇನೆ. ಮತ್ತೆ ಒಳಗೆ ಹೋಗುವ ಬಗ್ಗೆ ಸದ್ಯ ಯೋಚಿಸಿಲ್ಲ ಎಂದಿದ್ದಾರೆ.
ವೈದ್ಯರು 15 ದಿನಗಳ ಕಡ್ಡಾಯ ವಿಶ್ರಾಂತಿ ಸೂಚಿಸಿರುವುದರಿಂದ, 15 ದಿನಗಳ ಬಳಿಕ ತಮ್ಮ ಆರೋಗ್ಯ ಹೇಗಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಹೀಗಾಗಿ ಸದ್ಯಕ್ಕೆ ಓಂ ಪ್ರಕಾಶ್ ರಾವ್ ಅವರ ಬಿಗ್‌ಬಾಸ್ ರೀ-ಎಂಟ್ರಿ ಕನ್ಫರ್ಮ್ ಆಗಿಲ್ಲ. ಆರೋಗ್ಯ ಸುಧಾರಿಸಿದ ಬಳಿಕ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.