ಕಾರ್ಗಿಲ್ ಯುದ್ಧ ಯೋಧನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಗುರುಗ್ರಾಮ ಪಾರ್ಕಿಂಗ್ ಅಟೆಂಡೆಂಟ್ ಬಂಧನ

ಗುರುಗ್ರಾಮ: ನಿವೃತ್ತ ಗ್ರೂಪ್ ಕ್ಯಾಪ್ಟನ್ ಹಾಗೂ ಕಾರ್ಗಿಲ್ ಯುದ್ಧದ ಯೋಧ ಅಮಿತ್ ಕುಮಾರ್ ಗುಪ್ತಾ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಗುರುಗ್ರಾಮ ಪೊಲೀಸರು ಪಾರ್ಕಿಂಗ್ ಅಟೆಂಡೆಂಟ್‌ವೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹರಿಯಾಣದ ಫರಿದಾಬಾದ್ ಜಿಲ್ಲೆಯ ಕೋಟ್ ಗ್ರಾಮದ ನಿವಾಸಿ 24 ವರ್ಷದ ದೀಪಕ್ ಮಾವಿ ಎಂದು ಗುರುತಿಸಲಾಗಿದೆ.

ಸೆಕ್ಟರ್ 58ರ ಮ್ಯಾಗ್ನಮ್ ಗ್ಲೋಬಲ್ ಪಾರ್ಕ್‌ನ ವಾಣಿಜ್ಯ ಸಂಕೀರ್ಣದಲ್ಲಿ ಸೆಪ್ಟೆಂಬರ್ 10ರಂದು ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಪೊಲೀಸರು ಹಾಗೂ ಗುಪ್ತಾ ನೀಡಿದ ದೂರಿನ ಪ್ರಕಾರ, ಪಾರ್ಕಿಂಗ್ ಸಿಬ್ಬಂದಿ ಕಬ್ಬಿಣದ ಪೈಪ್‌ನಿಂದ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಗುಪ್ತಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮೊಣಕೈ ಮುರಿದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಅವರನ್ನು ಆಂಬ್ಯುಲೆನ್ಸ್ ಮೂಲಕ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮುರಿದ ಮೊಣಕೈಗೆ ಶಸ್ತ್ರಚಿಕಿತ್ಸೆ ನಡೆಸಿ ಪ್ಲೇಟ್ ಅಳವಡಿಸಲಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೀಪಕ್ ಮಾವಿಯನ್ನು ಬಂಧಿಸಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *