ಬೆಂಗಳೂರು: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆ ಹೆಚ್ಚಾಗಿತ್ತು. ಇದೀಗ ಬೆಂಗಳೂರಿನ ಈರುಳ್ಳಿ ಪ್ರಿಯರಿಗೆ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರದ ಕ್ರಮದಿಂದ ನಗರದಲ್ಲಿ ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಆರಂಭವಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ ₹65–₹75ರಷ್ಟಿದೆ. ಆದರೆ ನಾಫೆಡ್ ಮೂಲಕ ಬೆಂಗಳೂರಿಗೆ ಈರುಳ್ಳಿ ತರಲಾಗಿದ್ದು, ಕೆ.ಜಿಗೆ ಕೇವಲ ₹35ರಂತೆ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಾಫೆಡ್ ವಾಹನಗಳ ಮೂಲಕ ಜನರಿಗೆ ಈ ಅಗ್ಗದ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಈರುಳ್ಳಿ ಸಿಗುತ್ತಿರುವುದರಿಂದ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.
ನಾಫೆಡ್ ಅಂದ್ರೇನು?
NAFED (National Agricultural Cooperative Marketing Federation of India) ರೈತರ ಹಿತಕ್ಕಾಗಿ ಕೆಲಸ ಮಾಡುವ ಸಹಕಾರಿ ಸಂಸ್ಥೆಯಾಗಿದೆ. ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದು ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ನ್ಯಾಯಯುತ ದರದಲ್ಲಿ ಒದಗಿಸುವುದು ಇದರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಹೇಗೆ ಸಹಾಯ?
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿದಾಗ ರೈತರಿಗೆ ನಷ್ಟವಾಗದಂತೆ ನಾಫೆಡ್ ಖರೀದಿ ಮಾಡುತ್ತದೆ. ನಂತರ ಅಗತ್ಯವಿದ್ದಾಗ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿ ಸಂಗ್ರಹಿಸಿ ಇಡುತ್ತದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏಕಾಏಕಿ ಹೆಚ್ಚಾದಾಗ, ಈ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ನಿಯಂತ್ರಣಕ್ಕೆ ಸಹಾಯ ಮಾಡಲಾಗುತ್ತದೆ.
ಹೀಗಾಗಿ ಸದ್ಯ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಬೆಂಗಳೂರಿನ ಜನರಿಗೆ ₹35ಕ್ಕೆ ಈರುಳ್ಳಿ ಸಿಗುತ್ತಿರುವುದು ಬಿಗ್ ರಿಲೀಫ್ ಆಗಿದೆ.