22 ತಿಂಗಳಲ್ಲಿ 20 ಟನ್ ಚಿನ್ನ ಖರೀದಿಸಿದ ಚೀನಾ..! ಹಿಂದಿದೆ ಈ ಅಚ್ಚರಿಯ ರಹಸ್ಯ

ಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಸಾಮಾನ್ಯವಾಗಿ ಬೆಲೆ ಜಾಸ್ತಿಯಾದಾಗ ಖರೀದಿ ಕಡಿಮೆಯಾಗುತ್ತದೆ. ಆದರೆ ಚೀನಾದ ಕಥೆಯೇ ಬೇರೆ. ಬೆಲೆ ಏರಿಕೆಯ ನಡುವೆಯೂ ಚೀನಾ ಸತತವಾಗಿ ಚಿನ್ನ ಖರೀದಿಸುತ್ತಿದೆ.

ಕಳೆದ 22 ತಿಂಗಳಿಂದ ಚೀನಾ ತನ್ನ ಚಿನ್ನದ ಮೀಸಲನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ತಿಂಗಳು ಮಾತ್ರ ಸುಮಾರು 20 ಟನ್ ಚಿನ್ನ ಖರೀದಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಚೀನಾದ ಅಧಿಕೃತ ಚಿನ್ನದ ಮೀಸಲು ಸುಮಾರು 76.7 ಮಿಲಿಯನ್ ಔನ್ಸ್ಗೆ ತಲುಪಿದೆ ಎನ್ನಲಾಗಿದೆ.

ಇದು ಯಾಕೆ ಅನ್ನೋ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಚೀನಾದ ಈ ಖರೀದಿ ಕೇವಲ ಚಿನ್ನದ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡ ನಿರ್ಧಾರ ಅಲ್ಲ. ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ತನ್ನ ಮೀಸಲು ಆಸ್ತಿಗಳನ್ನು ಬಲಪಡಿಸುತ್ತಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಇದರಲ್ಲಿ ಅಮೆರಿಕದ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಕೂಡ ಪ್ರಮುಖ ಕಾರಣವಾಗಿರಬಹುದು. ಜಾಗತಿಕ ವಿದೇಶಿ ವಿನಿಮಯ ಮೀಸಲಿನಲ್ಲಿ ಡಾಲರ್‌ನ ಪಾಲು ಹಿಂದೆಗಿಂತ ಕಡಿಮೆಯಾಗಿದೆ. ಹೀಗಾಗಿ ಹಲವು ದೇಶಗಳ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ಮತ್ತೊಂದು ಸುರಕ್ಷಿತ ಆಸ್ತಿಯಾಗಿ ನೋಡುತ್ತಿವೆ.

ಚಿನ್ನದ ಮತ್ತೊಂದು ವಿಶೇಷತೆ ಏನೆಂದರೆ, ಇದು ಯಾವುದೇ ಒಂದು ದೇಶದ ಕರೆನ್ಸಿ ಅಥವಾ ಸರ್ಕಾರದ ಮೇಲೆ ನೇರವಾಗಿ ಅವಲಂಬಿತವಾಗಿಲ್ಲ. ಆರ್ಥಿಕ ಬಿಕ್ಕಟ್ಟು, ಮಾರುಕಟ್ಟೆ ಅಸ್ಥಿರತೆ ಅಥವಾ ಭೌಗೋಳಿಕ ರಾಜಕೀಯ ಸಮಸ್ಯೆಗಳು ಎದುರಾದಾಗ ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ಪರಿಗಣಿಸಲಾಗುತ್ತದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಮೀಕ್ಷೆಯಲ್ಲೂ ಹೆಚ್ಚಿನ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ಮೀಸಲು ಆಸ್ತಿಯಾಗಿ ನೋಡುತ್ತಿರುವುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಮೀಸಲು ಹೆಚ್ಚಿಸುವ ಉದ್ದೇಶವಿದೆ ಎಂದು ಹಲವು ಕೇಂದ್ರ ಬ್ಯಾಂಕ್‌ಗಳು ಹೇಳಿವೆ.

ಹೀಗಾಗಿ ಚೀನಾ ಮಾತ್ರವಲ್ಲ, ಹಲವು ದೇಶಗಳು ಕೂಡ ಚಿನ್ನದತ್ತ ಗಮನ ಹರಿಸುತ್ತಿವೆ. ಡಾಲರ್ ಇನ್ನೂ ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಕರೆನ್ಸಿಯಾಗಿದ್ದರೂ, ತಮ್ಮ ಮೀಸಲು ಆಸ್ತಿಗಳಲ್ಲಿ ಚಿನ್ನದ ಪ್ರಮಾಣ ಹೆಚ್ಚಿಸಿಕೊಳ್ಳುವ ಟ್ರೆಂಡ್ ಮಾತ್ರ ಈಗ ವೇಗ ಪಡೆಯುತ್ತಿದೆ.

ಚೀನಾದ ಸತತ ಚಿನ್ನ ಖರೀದಿ ಹಿಂದೆ ಇದೇ ದೊಡ್ಡ ಲೆಕ್ಕಾಚಾರ ಇರಬಹುದು ಎಂದು ತಜ್ಞರು ಅಂದಾಜಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಚೀನಾ ಇದೇ ವೇಗದಲ್ಲಿ ಚಿನ್ನ ಖರೀದಿಸುವುದೇ ಎಂಬುದು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *