Nepal Flood: ನೇಪಾಳದ ಉತ್ತರ ರಸುವಾ ಜಿಲ್ಲೆಯಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. 105 ಭಾರತೀಯರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಬೆಟ್ ಗಡಿಯ ಸಮೀಪ ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ಈ ದುರ್ಘಟನೆ ನಡೆದಿದೆ. ಟಿಬೆಟ್ ಭಾಗದಿಂದ ಭಾರೀ ಪ್ರಮಾಣದ ನೀರು ಭೋಟೆ ಕೋಶಿ ನದಿಗೆ ನುಗ್ಗಿದ ಪರಿಣಾಮ ಟಿಮುರೆ ಮತ್ತು ಸ್ಯಾಪ್ರು ಬೇಸಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಪ್ರವಾಹದ ರಭಸಕ್ಕೆ ಮನೆಗಳು, ವಾಹನಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯ ಯೋಜನೆಗಳು ಕೊಚ್ಚಿಹೋಗಿವೆ. ಸ್ಥಳೀಯರು ಜೀವ ಉಳಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳತ್ತ ಓಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಪ್ರವಾಹದ ಭೀಕರತೆ ಸ್ಪಷ್ಟವಾಗಿ ಕಾಣಿಸುತ್ತಿದೆ.
ಈ ನಡುವೆ ಪ್ರವಾಹದ ನೀರು ಕೆಳಭಾಗದತ್ತ ಹರಿಯುತ್ತಿರುವ ಹಿನ್ನೆಲೆಯಲ್ಲಿ ನೇಪಾಳ ಗಡಿಗೆ ಹೊಂದಿಕೊಂಡಿರುವ ಬಿಹಾರದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರವಾಹಕ್ಕೆ ಕಾರಣ ಏನು?
ಪ್ರವಾಹಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಟಿಬೆಟ್ ಭಾಗದಲ್ಲಿ ಭಾರೀ ಮಳೆಯಾಗಿರುವುದು ಉಪಗ್ರಹ ಚಿತ್ರಗಳಿಂದ ಕಂಡುಬಂದಿದೆ. ಇದರ ಜೊತೆಗೆ ಹಿಮನದಿ ಸರೋವರ ಸ್ಫೋಟಗೊಂಡಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಗೈರೋಂಗ್ ಗಡಿ ದಾಟುವ ಪ್ರದೇಶದ ಸಮೀಪ ಟಿಬೆಟ್ ಭಾಗದಲ್ಲೂ ಭೂಕುಸಿತ ಸಂಭವಿಸಿದೆ. ಇಲ್ಲಿ ಕೂಡ ಹಲವರು ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆ ತೀವ್ರ
ಪ್ರವಾಹದ ಸುದ್ದಿ ತಿಳಿಯುತ್ತಿದ್ದಂತೆ ನೇಪಾಳ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆದರೆ ಪ್ರವಾಹದ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್‌ಗೂ ತೊಂದರೆಯಾಗಿದೆ.
ಇನ್ನೊಂದೆಡೆ, ಟಿಬೆಟ್ ಭಾಗದಲ್ಲಿ ನಾಪತ್ತೆಯಾಗಿರುವವರನ್ನು ಪತ್ತೆಹಚ್ಚಲು ಎಲ್ಲ ರೀತಿಯ ಪ್ರಯತ್ನ ನಡೆಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಂದ ಅಪಾಯ ಹೆಚ್ಚಾಗದಂತೆ ಮುನ್ನೆಚ್ಚರಿಕೆ ವ್ಯವಸ್ಥೆ ಬಲಪಡಿಸುವಂತೆಯೂ ಸೂಚಿಸಲಾಗಿದೆ.