Toxic Movie: ‘ಟಾಕ್ಸಿಕ್’ಗೆ ಫಸ್ಟ್‌ ಡೇ ಫಸ್ಟ್‌ ಶೋ; ಯಶ್‌ ಎಂಟ್ರಿಗೆ ಥಿಯೇಟರ್‌ಗಳಲ್ಲಿ ಸೌಂಡ್‌ ಜೋರು!

Toxic Movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಬರೋಬ್ಬರಿ ನಾಲ್ಕುವರೆ ವರ್ಷಗಳ ಬಳಿಕ ಯಶ್‌ರನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡುತ್ತಿರುವ ಖುಷಿಯಲ್ಲಿ ಫ್ಯಾನ್ಸ್‌ ಸಂಭ್ರಮ ಜೋರಾಗಿದೆ.

ಕರ್ನಾಟಕದಲ್ಲೂ ಚಿತ್ರದ ಕ್ರೇಜ್‌ ಜೋರಾಗಿದ್ದು, 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ‘ಟಾಕ್ಸಿಕ್’ ತೆರೆಕಂಡಿದೆ. ಮುಂಜಾನೆಯಿಂದಲೇ ಅಭಿಮಾನಿಗಳು ಥಿಯೇಟರ್‌ಗಳ ಮುಂದೆ ಜಮಾಯಿಸಿ ಫಸ್ಟ್‌ ಶೋ ನೋಡಲು ಕಾತರದಿಂದ ಕಾಯುತ್ತಿದ್ದರು.

ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಬೆಳಗ್ಗೆ 5.45ಕ್ಕೆ ಮೊದಲ ಶೋ ಆರಂಭವಾಯಿತು. ಇಲ್ಲಿ ಒಟ್ಟು ಆರು ಶೋಗಳನ್ನು ಆಯೋಜಿಸಲಾಗಿದ್ದು, ಎಲ್ಲಾ ಶೋಗಳ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಔಟ್‌ ಆಗಿವೆ. ಫಸ್ಟ್‌ ಶೋ ನೋಡಲು ಬಂದ ಯಶ್‌ ಅಭಿಮಾನಿಗಳು ಥಿಯೇಟರ್‌ ಮುಂದೆ ಭರ್ಜರಿ ಸೆಲೆಬ್ರೇಷನ್‌ ಮಾಡಿದ್ದಾರೆ.

ಇತ್ತ ಮೆಜೆಸ್ಟಿಕ್‌ನ ಸಂತೋಷ್ ಥಿಯೇಟರ್‌ ಬಳಿಯೂ ಫ್ಯಾನ್ಸ್‌ ಹಬ್ಬದ ವಾತಾವರಣ ನಿರ್ಮಿಸಿದ್ದರು. ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಪರದೆಯ ಮೇಲೆ ಯಶ್ ಕಾಣಿಸಿಕೊಂಡ ಕ್ಷಣವೇ ಥಿಯೇಟರ್‌ ಒಳಗೆ ಅಭಿಮಾನಿಗಳ ಕೂಗು ಮುಗಿಲುಮುಟ್ಟಿದೆ. ಶಿಳ್ಳೆ, ಚಪ್ಪಾಳೆ ಹಾಗೂ ಯಶ್‌ ಘೋಷಣೆಗಳು ಮೊಳಗಿದ್ದು, ಕೆಲವರು ಸ್ಕ್ರೀನ್‌ ಮುಂದೆ ಹೂಮಳೆ ಸುರಿಸಿ ಸಂಭ್ರಮಿಸಿದ್ದಾರೆ.

ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಯಶ್‌ ಅವರ ಸಿನಿಮಾ ಥಿಯೇಟರ್‌ಗೆ ಬಂದಿರುವುದರಿಂದ ‘ಟಾಕ್ಸಿಕ್’ಗೆ ಆರಂಭದಲ್ಲೇ ಭರ್ಜರಿ ಕ್ರೇಜ್‌ ಸಿಕ್ಕಿದೆ. ಈಗ ಫ್ಯಾನ್ಸ್‌ ಸೆಲೆಬ್ರೇಷನ್‌ ಒಂದೆಡೆಯಾದರೆ, ಸಿನಿಮಾ ಹೇಗೆ ಮೂಡಿಬಂದಿದೆ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.

Leave a Reply

Your email address will not be published. Required fields are marked *