SIM Card: ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಹೊಸ ನಿಯಮಗಳು ಜಾರಿಗೆ ಬಂದಿವೆ. ಇನ್ನು ಮುಂದೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಮಿತಿಗಿಂತ ಹೆಚ್ಚು ಸಿಮ್‌ಕಾರ್ಡ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಸಿಮ್‌ಗಳ ದುರುಪಯೋಗ ತಡೆಯುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ.
ಹೊಸ ನಿಯಮದ ಪ್ರಕಾರ, ದೇಶದ ಬಹುತೇಕ ಭಾಗಗಳಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್‌ಕಾರ್ಡ್‌ಗಳನ್ನು ಹೊಂದಬಹುದು. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ 6 ಸಿಮ್‌ಕಾರ್ಡ್‌ಗಳಿಗೆ ಸೀಮಿತವಾಗಿದೆ.
ಹೀಗಾಗಿ ಹೊಸ ಸಿಮ್ ತೆಗೆದುಕೊಳ್ಳುವ ಮುನ್ನ ನಿಮ್ಮ ಹೆಸರಿನಲ್ಲಿ ಈಗಾಗಲೇ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ನಾವು ಬಳಕೆ ಮಾಡದ ಹಳೆಯ ಸಿಮ್‌ಗಳು ಕೂಡ ನಮ್ಮ ಹೆಸರಿನಲ್ಲಿ ಸಕ್ರಿಯವಾಗಿರಬಹುದು.
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಗೊತ್ತಾ?
ನಿಮ್ಮ ಹೆಸರಿನಲ್ಲಿ ಇರುವ ಮೊಬೈಲ್ ಸಂಪರ್ಕಗಳನ್ನು ಸಂಚಾರ್ ಸಾಥಿ ಪೋರ್ಟಲ್ ಮೂಲಕ ಪರಿಶೀಲಿಸಬಹುದು.
ಮೊದಲು ಪೋರ್ಟಲ್‌ಗೆ ತೆರಳಿ ‘ನಿಮ್ಮ ಹೆಸರಿನಲ್ಲಿ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ’ ಎಂಬ ಆಯ್ಕೆಯನ್ನು ಆರಿಸಬೇಕು. ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ಕ್ಯಾಪ್ಚಾ ಹಾಗೂ OTP ನಮೂದಿಸಿದರೆ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಪರ್ಕಗಳ ಮಾಹಿತಿ ಸಿಗುತ್ತದೆ.
ನಿಮಗೆ ಗೊತ್ತಿಲ್ಲದ ಯಾವುದೇ ಮೊಬೈಲ್ ಸಂಖ್ಯೆ ನಿಮ್ಮ ಹೆಸರಿನಲ್ಲಿ ಕಂಡುಬಂದರೆ ಅದರ ವಿರುದ್ಧ ದೂರು ನೀಡಬಹುದು. ಸಂಬಂಧಪಟ್ಟ ಸಂಖ್ಯೆಯನ್ನು ಆಯ್ಕೆ ಮಾಡಿ Report ಆಯ್ಕೆಯ ಮೂಲಕ ಮಾಹಿತಿ ಸಲ್ಲಿಸಬಹುದು.
ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಆ ಸಂಪರ್ಕವನ್ನು ಅಗತ್ಯವಿದ್ದರೆ ಸ್ಥಗಿತಗೊಳಿಸುವ ಪ್ರಕ್ರಿಯೆ ಕೈಗೊಳ್ಳುತ್ತಾರೆ.
ಇದು ಕೇವಲ ಹೊಸ ಸಿಮ್ ಪಡೆಯುವವರಿಗಷ್ಟೇ ಮುಖ್ಯವಲ್ಲ. ನಿಮ್ಮ ಹೆಸರಿನಲ್ಲಿ ಈಗಾಗಲೇ ಇರುವ ಹಳೆಯ ಅಥವಾ ಬಳಕೆಯಲ್ಲಿಲ್ಲದ ಸಿಮ್‌ಗಳನ್ನೂ ಒಮ್ಮೆ ಪರಿಶೀಲಿಸಿಕೊಳ್ಳುವುದು ಸುರಕ್ಷಿತ. ಅಪರಿಚಿತ ವ್ಯಕ್ತಿಯೊಬ್ಬರು ನಿಮ್ಮ ದಾಖಲೆ ಬಳಸಿ ಸಿಮ್ ಪಡೆದಿದ್ದರೆ, ಮುಂದೆ ಅದರ ದುರುಪಯೋಗದಿಂದ ನಿಮಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.